ದಾವಣಗೆರೆ: ಹಕ್ಕಿಜ್ವರ ದೃಢಪಟ್ಟ ಕಾರಣ ಹರಿಹರ ತಾಲೂಕಿನ ಬನ್ನಿಕೋಡು ಸೇರಿದಂತೆ ಸುತ್ತಮುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ವೈಜ್ಞಾನಿಕ ರೀತಿಯಲ್ಲಿ ಕೋಳಿಗಳನ್ನು ನಾಶಪಡಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದು, ಗ್ರಾಮಸ್ಥರು ತಮ್ಮ ಕೋಳಿಗಳನ್ನು ಕಲ್ಲಿಂಗ್ ಕಾರ್ಯಾಚರಣೆ ಮಾಡಲು ಸಹಕರಿಸಬೇಕು ಎಂದು ಪಶುಸಂಗೋಪನಾ ಇಲಾಖೆ ಮನವಿ ಮಾಡಿದೆ.
ಕೆಲ ಗ್ರಾಮಸ್ಥರು ಕಲ್ಲಿಂಗ್‍ಗೆ ಸಹಕರಿಸುತ್ತಿಲ್ಲ. ಆದರೆ ಹಕ್ಕಿಜ್ವರ ನಿಯಂತ್ರಣದ ಕ್ರಮವಾಗಿ ವೈಜ್ಞಾನಿಕವಾಗಿ ಕೋಳಿಗಳನ್ನು ನಾಶಪಡಿಸುವುದು ಅಗತ್ಯ. ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಕೋಳಿಗಳನ್ನು ಅವೈಜ್ಞಾನಿಕವಾಗಿ ನಾಶಪಡಿಸದೆ ಇಲಾಖೆ ಸಿಬ್ಬಂದಿ ಜೊತೆ ಸಹಕರಿಸಬೇಕು. ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಒಂದು ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು 'ರೋಗಪೀಡಿತ ವಲಯ' ಹಾಗೂ 1 ರಿಂದ 10 ಕಿಲೋಮೀಟರ್ ವ್ಯಾಪ್ತಿ ಪ್ರದೇಶವನ್ನು 'ಜಾಗೃತ ವಲಯ' ಎಂದು ಘೋಷಿಸಲಾಗಿದೆ.
ರೋಗಪೀಡಿತ ವಲಯದಲ್ಲಿ ಬರುವ ಎಲ್ಲಾ ಕೋಳಿಗಳು, ಮೊಟ್ಟೆ, ಕೋಳಿ ಆಹಾರವನ್ನು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ನಿಯಮಾನುಸಾರ ನಾಶಪಡಿಸಲು ಅವಶ್ಯಕ ವಾಹನಗಳನ್ನು ಹೊರತುಪಡಿಸಿ, ಸಾರ್ವಜನಿಕರು ಮತ್ತು ಇತರೆ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ. ಜಾಗೃತ ವಲಯದಲ್ಲಿ ಕೋಳಿ ಸಾಗಾಣಿಕೆ ನಿಷೇಧಿಸಿದೆ. ಕೋಳಿ, ಕೋಳಿ ಮಾಂಸ ಹಾಗೂ ಮೊಟ್ಟೆ ಮಾರಾಟ ಕೇಂದ್ರಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ಕೋಳಿ ಫಾರಂಗಳು, ಅಂಗಡಿಗಳಿಗೆ ಈ ನಿಷೇಧಾಜ್ಞೆ ಕುರಿತು ತಿಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಭಾಸ್ಕರ್ ನಾಯಕ್ ತಿಳಿಸಿದ್ದಾರೆ.
ಸಹಾಯವಾಣಿಗೆ ಮಾಹಿತಿ ನೀಡಿ : ಬನ್ನಿಕೋಡು ಮತ್ತು ಇತರೆಡೆ ಎಲ್ಲಿಯಾದರೂ ಕೋಳಿಗಳು, ಪಕ್ಷಿಗಳು ಮತ್ತು ಕಾಡು ಪಕ್ಷಿಗಳು ಅಸಹಜವಾಗಿ ಸತ್ತಿರುವುದು, ಸಾಯುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 08192-296832 ನ್ನು ಸಂಪರ್ಕಿಸಿ ಪಶುಸಂಗೋಪನೆ ಇಲಾಖೆಗೆ ಮಾಹಿತಿ ನೀಡಬಹುದೆಂದು ಡಾ.ಭಾಸ್ಕರ್ ನಾಯಕ್ ತಿಳಿಸಿದ್ದಾರೆ.