ಹರಿಹರ: ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಸಾವಿರಾರು ಜನರನ್ನು ಬಲಿ ಪಡೆದುಕೊಂಡಿದೆ. ಮಾರಣಾಂತಿಕ ಕೊರೊನಾ ವೈರಸ್ನಿಂದ ಎಲ್ಲರೂ ಬೆಚ್ಚಿಬಿದ್ದಿರುವಾಗಲೇ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.
ಹಕ್ಕಿ ಜ್ವರದ ಬಗ್ಗೆ ದೂರವಾಣಿಯಲ್ಲಿ ಮಾಹಿತಿ ನೀಡಿ ಜಿಲ್ಲಾ ಪಶುವೈದ್ಯಾಧಿಕಾರಿ ಡಾ. ಬಾಸ್ಕರ್ ನಾಯ್ಕ್ ಖಚಿತಪಡಿಸಿದ್ದಾರೆ. ಈ ಬಗ್ಗೆ ಅವರೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ಗ್ರಾಮದ ಫಾರಂನಲ್ಲಿ ಸತ್ತ ಕೋಳಿಯ ಸ್ಯಾಂಪಲ್ಗಳನ್ನು ಬೆಂಗಳೂರು ನಂತರ ಭೋಪಾಲ್ ಲ್ಯಾಬ್ಗಳಿಗೆ ಕಳುಹಿಸಲಾಗಿತ್ತು. ರಕ್ತ ಪರೀಕ್ಷೆಯ ನಂತರ ಸ್ಯಾಂಪಲ್ಗಳಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದ್ದು, ಈ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ನೀಡಲಾಗಿದೆ. ನಾಳೆ ಸರ್ಕಾರ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಸಾಯುತ್ತಿರುವುದರಿಂದ ಅನುಮಾನಗೊಂಡ ಕೋಳಿ ಫಾರಂ ಮಾಲೀಕರು, ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸಿದಾಗ ಸತ್ತ ಕೋಳಿಗಳನ್ನು ವೈದ್ಯರು ನೋಡಿ ಇದು ಹಕ್ಕಿ ಜ್ವರ ಇರಬಹುದೆಂದು ಜಿಲ್ಲಾ ಪಶುವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದರು. ನಂತರ ಕೋಳಿಗಳನ್ನು ಪರೀಕ್ಷೆಗೆ ಕಳಿಸಿದಾಗ ಹಕ್ಕಿ ಜ್ವರ ಇರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.
ಹಕ್ಕಿ ಜ್ಚರ ಎಂದರೇನು? :
ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಬರ್ಡ್ ಇನ್‌ಫ್ಲೂಯೆನ್ಝಾ ಅಥವಾ ಬರ್ಡ್ ಫ್ಲೂ ಎನ್ನುತ್ತಾರೆ. ಈ ಸೋಂಕಿಗೆ ಮುಖ್ಯ ಕಾರಣ ಹೆಚ್5ಎನ್1 ಎಂಬ ಹೆಸರಿನ ವೈರಸ್. ಇದೊಂದು ತೀವ್ರ ಸಾಂಕ್ರಾಮಿಕ ಪಿಡುಗು ಆಗಿದೆ. ಕೋಳಿಗಳ ಗುಂಪಿನಲ್ಲಿ ಒಂದು ಕೋಳಿಗೆ ಸೋಂಕು ಅಂಟಿದರೆ ಸಾಕು 48 ಗಂಟೆಗಳ ಒಳಗೆ ಗುಂಪಿನ ಎಲ್ಲಾ ಕೋಳಿಗಳು ಸೋಂಕಿನಿಂದ ಸತ್ತು ಹೋಗುತ್ತವೆ.