ದಾವಣಗೆರೆ: ಸಿದ್ದರಾಮಯ್ಯ ಪ್ರತಿಪಕ್ಷದಲ್ಲಿದ್ದುಕೊಂಡು ಮಾತನಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಕೋವಿಡ್ ನಿಯಂತ್ರಣ ಮಾಡಲು ಸರ್ಕಾರ ವಿಫಲವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯನವರು ಸರ್ಕಾರಕ್ಕೆ ಸಲಹೆ ಸೂಚನೆ ನೀಡಬೇಕು. ಕೊರೊನಾ ಎನ್ನುವುದು ಇಡೀ ಪ್ರಪಂಚಕ್ಕೆ ಬಂದಿದೆ, ಬೇರೆ ರಾಜ್ಯಗಳಲ್ಲಿ ಕೂಡ ಹೆಚ್ಚಾಗಿದೆ. ಮುಖ್ಯಮಂತ್ರಿ ರಾಜ್ಯಪಾಲರ ಜೊತೆ ಸಭೆ ನಡೆಸಿದ್ದಾರೆ, ಪ್ರತಿಪಕ್ಷದವರು ಕೂಡ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸಾಧಕ ಬಾಧಕಗಳನ್ನು ನೋಡಿಕೊಂಡು ಕಠಿಣ ಕ್ರಮಕ್ಕೆ ಒತ್ತು ನೀಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕೊರೊನಾ 2ನೇ ಅಲೆ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲ : ಮಾಜಿ ಸಿಎಂ ಸಿದ್ದರಾಮಯ್ಯ
ಖಾಸಗಿ ಆಸ್ಪತ್ರೆಯನ್ನು ಶೇ. 50 ಬೆಡ್ ಕೋವಿಡ್ ಚಿಕಿತ್ಸೆಗೆ ನೀಡಬೇಕು. ಇಲ್ಲದಿದ್ದರೆ ಅವರ ಪರವಾನಿಗಿ ರದ್ದು ಮಾಡಲಾಗುತ್ತದೆ ಎಂದರು. ಉಪಚುನಾವಣೆ ಇಲ್ಲದ ನಿಯಮ ಈಗ ಯಾಕೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚುನಾವಣೆ ಬೇರೆ, ಇದು ಬೇರೆ. ಚುನಾವಣೆ ಸಮಯದಲ್ಲಿ ಇಷ್ಟೊಂದು ಪ್ರಕರಣಗಳು ಇರಲಿಲ್ಲ. ಈಗ ವೇಗವಾಗಿ ಹಬ್ಬುತ್ತಿದೆ ಎಂದರು.