ದಾವಣಗೆರೆ: ಸಮಾಜ ಹಾಗೂ ದೇಶದ್ರೋಹದ ಕೆಲಸ ಮಾಡುವ ಯಾವುದೇ ಸಂಘಟನೆಯಿದ್ದರೂ ಮುಲಾಜಿಲ್ಲದೇ ನಿಷೇಧಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆಗ್ರಹಿಸಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಯಾರೇ ಗಲಭೆ ನಡೆಸಿದರೂ ಆರೋಪಿಗಳ ಹೆಡೆಮುರಿ ಕಟ್ಟಬೇಕು. ಬೆಂಗಳೂರು ಗಲಭೆಯಲ್ಲಿ ಐಸಿಸ್ ಸೇರಿದಂತೆ ಅಂತಾರಾಷ್ಟ್ರೀಯ ಜಾಲಗಳ ಕೈವಾಡ ಕುರಿತಂತೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ದೇಶದ ಐಕ್ಯತೆ, ಒಗ್ಗಟ್ಟು ಮುರಿಯಲು ಆಗದು ಎಂದು ಹೇಳಿದರು.
ಎಸ್ಡಿಪಿಐ, ಪಿಎಫ್ಐ ಸಂಘಟನೆ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯ ಅವಶ್ಯಕತೆ ಇಲ್ಲ. ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆಗಸ್ಟ್ 20ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಈ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಭೆಯಲ್ಲಿ ಚರ್ಚೆಗೆ ಬಂದರೆ ನಾವು ನಿಷೇಧದ ಬಗ್ಗೆ ಅಭಿಪ್ರಾಯ ಹೇಳುತ್ತೇವೆ ಎಂದು ತಿಳಿಸಿದರು.
ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಯ ಮೇಲೆ ಗಲಭೆಕೋರರು ದಾಳಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಆರೋಪಿಗಳ ಹೆಡೆಮುರಿ ಕಟ್ಟಿ ಬಂಧಿಸುವಂತೆ ಆಗ್ರಹಿಸಬಹುದಿತ್ತು. ಆದರೆ, ಯಾಕೆ ಈ ಬಗ್ಗೆ ಒತ್ತಾಯ ಮಾಡಿಲ್ಲ? ಅಖಂಡ ಶ್ರೀನಿವಾಸ್ ಅವರು ಬಿಜೆಪಿಗೆ ಬರುತ್ತಾರೆ ಎನ್ನುತ್ತಾರೆ. ಏನೆನೋ ಮಾತನಾಡುತ್ತಾರೆ. ಈ ಗಲಭೆಯ ಹಿಂದೆ ರಾಜಕೀಯ ಪಿತೂರಿ ಅಡಗಿದೆ ಎಂದು ಆರೋಪಿಸಿದರು.