ದಾವಣಗೆರೆ: ಅವನು ಎಸ್ಎಸ್ಎಲ್ಸಿ ಸಿಬಿಎಸ್ಇ ವಿಭಾಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿ. ಪ್ರತಿಯೊಂದು ಪರೀಕ್ಷೆಯಲ್ಲಿ ಶೇ 90 ರಷ್ಟು ಅಂಕ ತೆಗೆದು ಪೋಷಕರ ಬಳಿ ಶಬ್ಬಾಶ್ ಗಿರಿ ಪಡೆದುಕೊಳ್ಳುತ್ತಿದ್ದ. ಆದರೆ, ಮೊನ್ನೆ ನಡೆದ ಸಿಬಿಎಸ್ಇ ಪರೀಕ್ಷೆಯ ಫಲಿತಾಂಶ ತಲೆ ಕೆಳಗಾಗಿದೆ. ಕಡಿಮೆ ಅಂಕ ಪಡೆಯಲು ಶಾಲೆಯ ಕೆಲ ಶಿಕ್ಷಕರೇ ಕಾರಣ ಎಂದು ಆರೋಪ ಮಾಡಿದ್ದಾರೆ.
ದಾವಣಗೆರೆಯ ಪಿಜೆ ಬಡಾವಣೆಯ ನಿವಾಸಿ ಪ್ರದೀಪ್ ಜೈನ್ ಅವರ ಪುತ್ರ ಹೀತ್ ಜೈನ್ಗೆ ಸಿಬಿಎಸ್ಇ ಫಲಿತಾಂಶ ಆಘಾತ ತಂದಿದೆ. ಎಸ್ಎಸ್ಎಲ್ಸಿಯ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನಿಷ್ಠ 90 ರಷ್ಟು ಅಂಕ ಪಡೆದು ಪೋಷಕರಿಗೆ ಕೀರ್ತಿ ತಂದಿದ್ದ ವಿದ್ಯಾರ್ಥಿ ಹೀತ್ ಜೈನ್ ನಿಗೆ ಕಡಿಮೆ ಅಂಕ ಬಂದಿದ್ದು, ಇದಕ್ಕೆ ಜೈನ್ ವಿದ್ಯಾಲಯದ ಪ್ರಾಂಶುಪಾಲರಾಗಿರುವ ಅನಿತಾ ರಜಪೂತ್ ಅವರು ಕಾರಣ. ಹಣದ ಆಮಿಷಕ್ಕೊಳಗಾಗಿ ಈ ರೀತಿ ಮಾಡಿದ್ದಾರೆಂದು ಪೋಷಕರು ದೂರಿದ್ದಾರೆ.
ವಿದ್ಯಾರ್ಥಿ ಹೀತ್ ಜೈನ್ ವಿದ್ಯಾಲಯದ ಸಿಬಿಎಸ್ಇ ಶಾಲೆಯ 2020-21 ನೇ ಸಾಲಿನ ಎಸ್ಎಸ್ಎಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಏಪ್ರಿಲ್ ತಿಂಗಳಿನಲ್ಲಿ ಕೊರೊನಾ ಕಡಿಮೆಯಾಗದ ಕಾರಣ ಎಸ್ಎಸ್ಎಲ್ಸಿಯ ಸಿಬಿಎಸ್ಇಯ ಪ್ರಿಪರೇಟರಿ ಪರೀಕ್ಷೆಯನ್ನು ಮಕ್ಕಳಿಗೆ ಶಾಲೆಗೆ ಕರೆದು ಬರೆಸಬೇಕೆಂದು ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿತ್ತು.
ಸರ್ಕಾರದ ಆದೇಶದಂತೆ ಎಲ್ಲಾ ವಿದ್ಯಾರ್ಥಿಗಳಂತೆ ಹೀತ್ ಜೈನ್ ಕೂಡ ಪರೀಕ್ಷೆ ಬರೆದಿದ್ದಾನೆ. ಆದರೆ ಆರು ಉತ್ತರ ಪತ್ರಿಕೆಗಳಲ್ಲಿ ಶಾಲೆಯವರು ಬೇಕಾಬಿಟ್ಟಿಯಾಗಿ ಮೌಲ್ಯಮಾಪನ ಮಾಡಿ ಕಡಿಮೆ ಅಂಕಗಳನ್ನು ನೀಡಿದ್ದಲ್ಲದೆ, ಇಡೀ ಪತ್ರಿಕೆಗಳನ್ನು ತಿದ್ದಿ ತೀಡಿ ಮೂರು ಅಂಕ ನೀಡಿ ಬಳಿಕ ಮತ್ತೆ ಅದನ್ನು ಒಂದು ಅಂಕ ಎಂದು ತಿದ್ದಿರುವುದು ಉತ್ತರ ಪತ್ರಿಕೆಗಳಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ.
ಸಿಬಿಎಸ್ಇ ಪ್ರಿಪರೇಟರಿ ಪರೀಕ್ಷೆಯನ್ನು ಬರೆದ ಎಲ್ಲಾ ವಿಷಯಗಳ ಅಂಕಗಳನ್ನು ಹಾಗು ಒಂಭತ್ತನೇ ತರಗತಿಯ ಅಂಕಗಳನ್ನು ಕೂಡ ಪರಿಗಣಿಸದೆ ಶೇ. 73 ರಷ್ಟು ಕಡಿಮೆ ಅಂಕಗಳನ್ನು ನೀಡಿರುವುದು ಪೋಷಕರಿಗೆ ಆಘಾತ ತಂದಿದೆ. ಮಗನ ಫಲಿತಾಂಶ ನೋಡಿದ ತಂದೆ ಪ್ರದೀಪ್ ಜೈನ್ ತಕ್ಷಣ ಶಾಲೆಗೆ ದೌಡಾಯಿಸಿ ಪ್ರಾಂಶುಪಾಲರಿಗೆ ಹಾಗೂ ಆಡಳಿತ ಮಂಡಳಿಗೆ ಕೇಳಿದಾಗ ಇಷ್ಟೇ ಅಂಕ ನಿಮ್ಮ ಮಗ ಪಡೆದಿರುವುದು ಏನ್ಮಾಡ್ತಿರಾ ಮಾಡಿಕೊಳ್ಳಿ ಎಂದು ಧಮ್ಕಿ ಹಾಕಿದ್ದಾರಂತೆ.
ಇದರಿಂದ ಬೇಸತ್ತ ತಂದೆ ಪ್ರದೀಪ್ ಜೈನ್ ಎಲ್ಲಾ ಉತ್ತರ ಪತ್ರಿಕೆಗಳನ್ನು ಪಡೆದು ನೋಡಿದಾಗ ಅದರಲ್ಲಿ ಬೇಕಾಬಿಟ್ಟಿಯಾಗಿ ಮೌಲ್ಯಮಾಪನ ಮಾಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಪೋಷಕರು ಡಿಡಿಪಿಐ ಹಾಗೂ ಜಿಲ್ಲಾಧಿಕಾರಿಗೆ ಶಾಲೆಯ ವಿರುದ್ಧ ದೂರು ನೀಡಿದ್ದಾರೆ. ಡಿಡಿಪಿಐ ಈಗಾಗಲೇ ಜೈನ್ ವಿದ್ಯಾಲಯದ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.
ಆದರೆ ಪ್ರಾಂಶುಪಾಲರಾದ ಅನಿತಾ ರಜಪೂತ್ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು, ವಿದ್ಯಾರ್ಥಿ ಎಷ್ಟು ಬರೆದಿದ್ದಾನೋ ಅಷ್ಟೇ ಅಂಕಗಳನ್ನು ನೀಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.