ದಾವಣಗೆರೆ: ಜಗಳೂರಿನ 57 ಕೆರೆ ತುಂಬಿಸುವ ಯೋಜನೆ ಈಗಾಗಲೇ ಯಶಸ್ವಿಯಾಗಿದೆ. ಸಾಕಷ್ಟು ಕೆರೆಗಳಿಗೆ ನೀರು ಕೂಡ ಬಂದಿದೆ. ಆ 57 ಕೆರೆಗಳಿಗೆ ನೀರು ತುಂಬಿಸುವ ಕೆರೆಗಳ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತಾಯಿಟೋಣಿ ಗ್ರಾಮದ ಕೆರೆ ಕೂಡ ಒಂದು ಎಂದು ನೀರಾವರಿ ಇಲಾಖೆ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ತಾಯಿ ಟೋಣಿ ಗ್ರಾಮದಲ್ಲಿ ಕೆರೆಯೇ ಇಲ್ಲ ಎಂದು ಗ್ರಾಮಸ್ಥರು, ರೈತರು ತಾಲೂಕು ಆಡಳಿತದ ಗಮನಕ್ಕೆ ತಂದಿದ್ದರು. ಇದೀಗ ಇದೊಂದು ದೊಡ್ಡ ವಿವಾದವಾಗಿ ಪರಿಣಮಿಸಿದೆ.
ಜಗಳೂರು ತಾಲೂಕಿನ ತಾಯಿ ಟೋಣಿಯಲ್ಲಿರುವ 10 ಎಕರೆ ಜಮೀನು ಕೆರೆ ಹೋಲುವಂತಿದೆ. ಅದೇ ತಾಯಿಟೋಣಿ ಗ್ರಾಮದ ಕೆಲವರು ಇದು ಕೆರೆ. 57 ಕೆರೆ ತುಂಬಿಸುವ ಯೋಜನೆಯ ಪಟ್ಟಿಯಲ್ಲಿ ತಾಯಿಟೋಣಿ ಗ್ರಾಮದಲ್ಲಿ ಕೆರೆ ಇದೆ. ಅದರಲ್ಲಿ ಕೆಲವರು ಉಳುಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಅಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಕೇಳಿದರೆ ಇದು ನಮ್ಮ ಪೂರ್ವಜರು, ತಾತ ಮುತ್ತಾತನ ಕಾಲದಲ್ಲಿ ಉಳುಮೆ ಮಾಡುತ್ತಿದ್ದ ಜಮೀನು. ಅಂದಿನ ಬ್ರಿಟಿಷ್ ಹಾಗೂ ಮೈಸೂರು ಸಂಸ್ಥಾನದ ಅಧಿಕಾರದ ಅವಧಿಯಲ್ಲಿ ಇದು ಕ್ರಯ ಜಮೀನು ಎಂದು ಘೋಷಿಸಿ ತಾಯಿ ಟೋಣಿ ಗ್ರಾಮಸ್ಥರಿಗೆ ನೀಡಿತ್ತು. ಜಮೀನಿನ ನಾಲ್ಕು ಭಾಗದಲ್ಲಿ ನೀರು ನಿಲ್ಲಲು ಏರಿಗಳನ್ನು ಕಟ್ಟಲಾಗುತ್ತಿತ್ತಂತೆ. ಅದು ಇಂದಿಗೂ ಕೂಡ ಇದ್ದು ಕೆರೆ ಏರಿಯಾವನ್ನು ಹೋಲುವಂತಿದೆ ಎಂಬುವುದು ರೈತರ ವಾದ.
ದಾಖಲೆಗಳಲ್ಲಿ ಕೆರೆ ಇಲ್ಲ ಹೇಳುತ್ತಿದ್ದಾರೆ. ಆದರೆ ತಾಲೂಕು ಕಚೇರಿಯಲ್ಲಿರುವ ದಾಖಲೆಗಳ ಪ್ರಕಾರ ಕಾಲುವೆಯಿಂದ ನೀರು ಹೋಗಲು ಜಾಗ ಇದೆ. ತೂಬು ಇದೆ. ಹೀಗಿರುವಾಗ ಅದು ಕೆರೆ ತಾನೇ. ಕಾವೇರಿ ನಿಗಮ ಮಂಡಳಿಯಲ್ಲಿ ಕೂಡ ತಾಯಿಟೋಣಿ ಕೆರೆ ಇದೆ ಎಂದು ತೋರಿಸಲಾಗಿದೆ. ಅಲ್ಲಿ ಕೆರೆ ಇದೆ ಎಂದು ಎಸ್ಎಫ್ಐ ಹೋರಾಟಗಾರ ಮಹಾಲಿಂಗಪ್ಪ ಹೇಳುತ್ತಾರೆ.
ಜಮೀನು ಉಳುಮೆ ಮಾಡುತ್ತಿರುವವರಿಗೆ ಜನರು ಕಿರುಕುಳ ನೀಡುತ್ತಿದ್ದಾರೆ. ಈ ಜಮೀನು ವಿಚಾರವಾಗಿ ಕೋರ್ಟ್ ಕೂಡ ರೈತರ ಪರವಾಗಿ ತೀರ್ಪು ನೀಡಿದೆ. ಇದಲ್ಲದೆ ಇದು ರೈತರಿಗೆ ಸೇರಿರುವ ಸ್ವಂತ ಜಮೀನು ಎಂದು ತಹಶೀಲ್ದಾರರು ಕೂಡ ಸರ್ವೇ ಮಾಡಿ ದಾಖಲೆಗಳು ಸರಿ ಇದ್ದರಿಂದ ಕೈ ಬಿಟ್ಟಿದ್ದಾರೆ. ಆದರೆ ವಿವಾದ ಹಿಂದೆ ಹಾಲಿ ಶಾಸಕ ರಾಮ ಚಂದ್ರಪ್ಪ ಕೈವಾಡ ಇದೆ ಎಂದು ರೈತರು ಆರೋಪಿಸಿದ್ದಾರೆ.
ಅಲ್ಲದೆ ಜಮೀನಿನ ಸುತ್ತ ಇರುವುದು ಕೆರೆ ಏರಿ ಅಲ್ಲ. ಬಾವಿಗೆ ನೀರು ಹಾಯಿಸಲು ಈ ಏರಿ ಮಾಡಿಕೊಳ್ಳಲಾಗಿದೆ. ಜಮೀನುಗಳಿಗೆ ನೀರು ಹಾಯಿಸಲು ಕೂಡ ಒಂದು ತೂಬು ಕೂಡ ನಿರ್ಮಾಣ ಮಾಡಲಾಗಿತ್ತು ಎಂದು ರೈತ ಕುಬೇಂದ್ರ ರೆಡ್ಡಿ ಸ್ಪಷ್ಟನೆ ನೀಡಿದರು.