ದಾವಣಗೆರೆ/ಹರಿಹರ : ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸುವುದರ ಜೊತೆಯಲ್ಲಿ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಎಸ್.ರಾಮಪ್ಪ ಗ್ರಾಮಸ್ಥರಿಗೆ ಸಲಹೆ ನೀಡಿದರು.
ತಾಲೂಕಿನ ಹೊಸಳ್ಳಿ ಗ್ರಾಮದ ವೇಮನ ಮಠದ ಆವರಣದಲ್ಲಿ 3.5 ಕೋಟಿ ವೆಚ್ಚದ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಶ್ರೀ ಮಠದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಶ್ರೀಗಳ ಆಶೀರ್ವಾದದಿಂದ ಇಂದು ನಾನು ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಿದ್ದೇನೆ ಎಂದರು.
ತಾಲೂಕಿನ ಜಿಗಳಿ, ಚಿಕ್ಕಬಿದರಿ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಇಲಾಖೆಯಿಂದ 12 ಲಕ್ಷ ರೂ. ವೆಚ್ಚದ ಆಧುನಿಕ ರೀತಿಯ ಅಂಗನವಾಡಿ ಕೇಂದ್ರ ನಿರ್ಮಾಣವಾಗಲಿದೆ. ಈ ರೀತಿ ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಅಭಿವೃದ್ಧಿ ಕೆಲಸಗಳಿಗೆ ಮುಕ್ತ ಮನಸ್ಸಿನಿಂದ ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಲು ಸಾಧ್ಯ ಎಂದರು. ಪ್ರಸ್ತುತ ದಿನಮಾನದಲ್ಲಿ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕವೇ ಅನೇಕ ಯೋಜನೆಗಳನ್ನು ಜಾರಿ ಗೊಳಿಸುತ್ತಿದ್ದು, ಅಗತ್ಯ ಕಟ್ಟಡದ ಸೌಲಭ್ಯವಿರುವ ಕೇಂದ್ರಗಳ ಅಗತ್ಯವಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ಸಹ ಉತ್ತಮ ಆಧುನಿಕ ಅಂಗನವಾಡಿ ಕೇಂದ್ರಗಳು ಸಕಾಲದಲ್ಲಿ ನಿರ್ಮಾಣವಾಗಿ, ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಹೇಳಿದರು.
ಜಿಗಳಿ ಗ್ರಾಮದ ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ 25 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇನೆ. ಬರುವ ದಿನಗಳಲ್ಲಿ ಪ್ರತಿ ಗ್ರಾಮದ ಎಸ್ಸಿ, ಎಸ್ಟಿ ಬಡಾವಣೆಗಳಲ್ಲಿ ಸುಸಜ್ಜಿತ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಮೂಲ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು ಹಾಗೂ ವಸತಿ ಸೌಲಭ್ಯಕ್ಕೂ ಆದ್ಯತೆ ನೀಡಲಾಗುವುದು ಎಂದರು. ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಸಿಸಿ ರಸ್ತೆ, ಚರಂಡಿ, ನಮ್ಮ ಹೊಲ ನಮ್ಮ ರಸ್ತೆ, ಕೆರೆ ಅಭಿವೃದ್ಧಿ, ತಡೆ ಒಡ್ಡುಗಳ ಕಾಮಗಾರಿಗಳು ನಡೆಯುತ್ತಿದ್ದು, ಶೇ. 65ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಬಹುತೇಕ ಗ್ರಾಮಗಳಲ್ಲಿ ಫ್ಲೋರೈಡ್ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮತ್ತೆ ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿದ್ದು, ಗ್ರಾಮ ಪಂಚಾಯಿತಿಗಳು ಸ್ಥಳ ನೀಡಿದರೆ ಶೀಘ್ರವೇ ಘಟಕ ನಿರ್ಮಾಣವಾಗಲಿವೆ. ವಸತಿ ಯೋಜನೆ ಅಡಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ವಸತಿ ರಹಿತರಿಗೆ ಮನೆ ನೀಡಲಾಗುವುದು. ಕೆಲವು ಗ್ರಾಮಗಳಲ್ಲಿ ಎಸ್ಸಿ ವರ್ಗದವರಿಗೆ ವಿವಿಧ ಸೌಲಭ್ಯ ಕಲ್ಪಿಸಲು 2 ಕೋಟಿ ರೂ. ವೆಚ್ಚದ ಹಲವು ಕಾಮಗಾರಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದರು.