ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮನವಿ ಮಾಡಿದ್ದಾರೆ.
ಕುಮಾರಕೃಪ ಅತಿಥಿ ಗೃಹದಲ್ಲಿ ಇಂದು ಭೇಟಿ ಮಾಡಿ ಸಮಾಲೋಚಿಸುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಖಂಡ ಶ್ರೀನಿವಾಸಮೂರ್ತಿಗೆ ಅನ್ಯಾಯವಾಗಿದೆ. ಅವರ ಪರವಾಗಿ ನಾನು ಇದ್ದೇನೆ. ಇದರಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡವಿದೆ. ಮೊದಲು ಇರಲಿಲ್ಲ, ಈಗ ಪ್ರೂವ್ ಆಗಿದೆ. ಜೈಲಿಗೆ ಹೋಗಿ ಬಂದಿದ್ದಾರೆ. ಮೂರು ತಿಂಗಳಾದ್ರೂ ಪಕ್ಷ ಕ್ರಮ ಕೈಗೊಂಡಿಲ್ಲ. ಅಧ್ಯಕ್ಷರು ಪುತ್ರಿಯ ಮದುವೆಯಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಇತ್ತ ಗಮನಹರಿಸಿರಲಿಲ್ಲ ಎಂದು ಅನಿಸುತ್ತದೆ. ಇದರ ಬಗ್ಗೆ ಸುರ್ಜೇವಾಲಾರಿಗೆ ವಿವರಿಸ್ತೇನೆ ಎಂದರು.
ಸಂಪತ್ ರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ಈಗ ನಾನು ಇಲ್ಲಿಗೆ ಬಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೂ ಮಾತನಾಡುತ್ತೇನೆ. ಸಂಪತ್ ವಿರುದ್ಧದ ಆರೋಪ ಸಾಬೀತಾಗಿಲ್ಲ ಅಂತ ಈ ಮೊದಲು ಕೆಪಿಸಿಸಿ ಅಧ್ಯಕ್ಷರು ಹೇಳಿದ್ರು. ಆದರೆ ಈಗ ಜೈಲಿಗೆ ಹೋಗಿ ಬಂದಿದ್ದಾರೆ. ಹೀಗಿರುವಾಗ ಸಂಪತ್ ರಾಜ್ ಮೇಲೆ ಕ್ರಮ ಆಗಲೇಬೇಕು ಎಂದು ಒತ್ತಾಯಿಸಿದರು.
ಪುಲಿಕೇಶಿನಗರ ಕ್ಷೇತ್ರದ ಕೈ ಮುಖಂಡ ತಾರಿಕ್ ಅನ್ವರ್ ಮಾತನಾಡಿ, ಸುರ್ಜೇವಾಲಾರ ಭೇಟಿಗೆ ಬಂದಿದ್ದೇವೆ. ನಮ್ಮ ಶಾಸಕ ಅಖಂಡ ಶ್ರೀನಿವಾಸ್ರಿಗೆ ಅನ್ಯಾಯವಾಗಿದೆ. ಈಗಾಗಲೇ ಮಾಜಿ ಮೇಯರ್ ಪಾತ್ರದ ಬಗ್ಗೆ ಗೊತ್ತಾಗಿದೆ. ಅವರನ್ನ ಪಕ್ಷದಿಂದ ಉಚ್ಛಾಟಿಸಬೇಕು. ಇದು ನಮ್ಮ ಬೇಡಿಕೆ ಎಂದರು.