ಬೆಂಗಳೂರು : ರಾಜ್ಯದ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳು ಮಾರ್ಚ್ 1ರಿಂದ ತನ್ನ ಎಲ್ಲ ಕಡತಗಳನ್ನು ಇ-ಕಚೇರಿ ಮೂಲಕವೇ ಆನ್‌ಲೈನ್‌ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಈ ಗಡುವಿನ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಇ-ಆಫೀಸ್ ತಂತ್ರಾಂಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿವಿಗಳಿಗೆ ಈ ಹಿಂದೆಯೇ ಸೂಚಿಸಿತ್ತು. ಆದರೂ ಕೆಲ ವಿವಿಗಳಲ್ಲಿ ಈ ಕೆಲಸ ಆಗಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಎಚ್ಚರಿಸಿದ್ದಾರೆ.
ತಮ್ಮ ಕಚೇರಿಯು ಈಗಾಗಲೇ ಸಂಪೂರ್ಣವಾಗಿ ಇ-ಆಫೀಸ್ ತಂತ್ರಾಂಶದ ಮೇಲೆಯೇ ಕೆಲಸ ಮಾಡುತ್ತಿದೆ. ಆದರೆ, ಇಲಾಖೆಗೆ ವಿವಿಗಳಿಂದ ಎಲ್ಲ ಪತ್ರಗಳು, ಕಡತಗಳು ಮತ್ತು ಪ್ರಸ್ತಾವನೆಗಳು ಭೌತಿಕ ರೂಪದಲ್ಲಿ ಬರುತ್ತಿವೆ. ಇದರಿಂದಾಗಿ ಇ-ಆಫೀಸ್ ತಂತ್ರಾಂಶ ಅಳವಡಿಕೆಯ ಮೂಲ ಉದ್ದೇಶವೇ ವಿಫಲವಾದಂತಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ 3 ದಿನಗಳ ಹೆಲಿ ಟೂರಿಸಂ.. ನಗರದ ಸೌಂದರ್ಯ ಸವಿಯುವ ಅವಕಾಶ..
ವಿವಿಗಳ ಆಡಳಿತವೂ ಸೇರಿದಂತೆ ಪ್ರತಿ ಕೆಲಸವೂ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ಮಾಡಬೇಕೆನ್ನುವುದು ಇ-ಆಫೀಸ್ ತಂತ್ರಾಂಶದ ಗುರಿಯಾಗಿದೆ. ವಿವಿಗಳು ಸಮಕಾಲೀನ ಶೈಲಿ ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಜೊತೆಗೆ, ಎನ್ಇಪಿ ಅನುಸಾರ ವಿವಿಗಳಲ್ಲಿ ನಡೆಯುತ್ತಿರುವ ಡಿಜಿಟಲೀಕರಣ, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಅಳವಡಿಕೆ, ರಾಷ್ಟ್ರೀಯ ಶೈಕ್ಷಣಿಕ ಕೋಶ (ಎನ್ಎಡಿ), ಇ-ಆಫೀಸ್ ಬಳಕೆಗೆ ವಿವಿಗಳಲ್ಲಿನ ಸಿಬ್ಬಂದಿಯನ್ನು ಹೇಗೆ ಸಿದ್ಧಗೊಳಿಸಲಾಗಿದೆ ಎನ್ನುವುದನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಿ 15 ದಿನಗಳಲ್ಲಿ ತಮಗೆ ವರದಿ ನೀಡುವಂತೆಯೂ ಅವರು ಸೂಚಿಸಿದ್ದಾರೆ.