ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಹೀಗಾಗಿ, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಮಾರ್ಗಸೂಚಿ ಹೊರಡಿಸಲಾಗಿದೆ.
ಅಂದಹಾಗೆ, ರಾಜ್ಯದಲ್ಲಿ ಜುಲೈ 1 ರಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ಮಕ್ಕಳ ಕಲಿಕೆಗೆ ಪೂರ್ವ ತಯಾರಿಯನ್ನು, ದಾಖಲಾತಿ ಪ್ರವೇಶವನ್ನ ಆರಂಭಿಸಲು ಜೂನ್ 15 ರಿಂದ ಅಂದರೆ ನಾಳೆಯಿಂದ ಆರಂಭಿಸಲು ಸೂಚಿಸಲಾಗಿದೆ.
(ನಾಳೆಯಿಂದ ಶೈಕ್ಷಣಿಕ ವರ್ಷ ಆರಂಭ.. ಯಾವುದೇ ಕಾರಣಕ್ಕೂ ಮುಂದೂಡಲ್ಲ ಎಂದ ಶಿಕ್ಷಣ ಇಲಾಖೆ)
ಕೋವಿಡ್-19ರ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಕಠಿಣ ನಿರ್ಬಂಧಗಳನ್ನು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ, ಚಿಕ್ಕೋಡಿ (ಶೈಕ್ಷಣಿಕ ಜಿಲ್ಲೆ), ಮಂಡ್ಯ ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂದುವರೆಸಲಾಗಿದೆ.
ಹೀಗಾಗಿ, ಈ ಜಿಲ್ಲೆಗಳ ಎಲ್ಲಾ ಶಾಲಾ ಶಿಕ್ಷಕರು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷದ ಪೂರ್ವ ತಯಾರಿ ಕಾರ್ಯಗಳನ್ನು ಮಾಡಿಕೊಳ್ಳಲು ತಮ್ಮ ಮನೆಗಳಿಂದ ಕಾರ್ಯನಿರ್ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಕಠಿಣ ನಿರ್ಬಂಧಗಳನ್ನು ಭಾಗಶಃ ತೆರವುಗೊಳಿಸಿದ ತಕ್ಷಣವೇ ಶಿಕ್ಷಕರು ಶಾಲೆಗಳಿಗೆ ತೆರಳುವಂತೆ ಆದೇಶಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಎಲ್ಲ ಶಿಕ್ಷಕರು ಹಾಜರಾಗುವಂತೆ ಸೂಚಿಸಲಾಗಿದೆ.