ಬೆಂಗಳೂರು: ತೇಜಸ್ವಿ ಸೂರ್ಯ ವಿರುದ್ಧ ರಾಜ್ಯ ಮಹಿಳಾ ಆಯೋಗ ಗರಂ ಆಗಿದೆ. ಕಿರುಕುಳ ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದ್ರೂ ಅವರು ಹಾಜರಾಗಿಲ್ಲ. ಹಾಗಾಗಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಸಿಡಿಮಿಡಿಗೊಂಡಿದ್ದಾರೆ.
ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕೇಳಿಬಂದ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗ ನೊಟೀಸ್ ಜಾರಿ ಮಾಡಿತ್ತು. ಈ ಕುರಿತು ನಿನ್ನೆ ಮಧ್ಯಾಹ್ನ ವಿಚಾರಣೆಗೆ ಬರುವುದಾಗಿ ಹೇಳಿರುವ ತೇಜಸ್ವಿ ಆಯೋಗಕ್ಕೆ ಬರಲಿಲ್ಲ. ಈ ಕುರಿತು ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ತೇಜಸ್ವಿ ಸೂರ್ಯ ಅವರಿಗೆ ಘಟನೆ ನಡೆದಿದೆಯೇ ಅಥವಾ ಇಲ್ಲವೇ ಅಂತ ಹೇಳುವ ಸೌಜನ್ಯ ಬೇಕು. ಮಹಿಳಾ ಆಯೋಗದ ನಿಯಮಗಳ ಬಗ್ಗೆ ಅವರು ನನಗೆ ವಕೀಲರ ಮೂಲಕ ಹೇಳಿಕೊಟ್ಟಿದ್ದಾರೆ. ಆದರೆ ಅದರ ಅಗತ್ಯ ನನಗಿಲ್ಲ. ನಾನು ಸುಮ್ಮನೆ ಇಲ್ಲಿ ಅಧ್ಯಕ್ಷೆ ಆಗಿಲ್ಲ. ನನಗೆ ಅಧಿಕಾರ ಇರುವ ಕಾರಣ ಆಯೋಗಕ್ಕೆ ಬನ್ನಿ ಅಂತ ನೊಟೀಸ್ ನೀಡಿದ್ದೇನೆ. ಚುನಾವಣೆ ನಿಮಿತ್ತ ಅವರು ಬ್ಯುಸಿ ಆಗಿರಬಹುದು. ಆದರೂ ಆಯೋಗಕ್ಕೆ ಆಗಮಿಸಿ ಹೇಳಿಕೆ ನೀಡುವುದು ಅವರ ಕರ್ತವ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೇಜಸ್ವಿ ಸೂರ್ಯ ಅವರು ಒಂದು ವಾರವಾದ್ರೂ ಸಮಯ ತೆಗೆದುಕೊಳ್ಳಲಿ. ಆದರೆ, ಅವರು ಆಯೋಗಕ್ಕೆ ಬಂದು ಹೇಳಿಕೆ ಕೊಡಲೇಬೇಕು ಎಂದು ಇದೇ ವೇಳೆ ನಾಗಲಕ್ಷ್ಮಿ ಬಾಯಿ ತಾಕೀತು ಮಾಡಿದ್ದಾರೆ.