ಬೆಂಗಳೂರು: ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಳ್ಳದೇ ಮತ್ತೊಮ್ಮೆ ಕಠಿಣ ಕ್ರಮ ಜಾರಿಗೆ ತಂದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಎರಡನೇ ಅಲೆ ಬರುತ್ತೆ ಅಂತ ವರದಿ ಕೊಟ್ಟಿದ್ದರು. ಜನವರಿಯಲ್ಲೇ ವರದಿ ನೀಡಲಾಗಿತ್ತು. ಸರ್ಕಾರ ಆಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ. ಐದು ರಾಜ್ಯಗಳಲ್ಲಿ ಎಲೆಕ್ಷನ್ ಬೇಕಾಗಿರಲಿಲ್ಲ, ಚುನಾವಣೆಯನ್ನ ಮುಂದೂಡಬಹುದಿತ್ತು. ಆದರೆ, ಚುನಾವಣೆ ಮುಂದಕ್ಕೆ ಹಾಕಲಿಲ್ಲ. ಬದಲಾಗಿ ಚುನಾವಣಾ ರ‍್ಯಾಲಿಗಳನ್ನು ನಡೆಸಿದ್ರು. ಇವರು ಜನರ ಜೊತೆ ಚೆಲ್ಲಾಟವಾಡ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕುಂಭಮೇಳಕ್ಕೆ ಅವಕಾಶ ಕೊಟ್ಟಿದ್ಯಾಕೆ?
ನಾನು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದೆ. ಇವರು ಚುನಾವಣೆ ನಡೆಸದಿದ್ದರೆ ನಾನ್ಯಾಕೆ ಹೋಗ್ತಿದ್ದೆ. ಮದ್ರಾಸ್ ಹೈಕೋರ್ಟ್ ಛೀಮಾರಿ ಹಾಕಿದೆ. ಕೋವಿಡ್ ಹೆಚ್ಚಳಕ್ಕೆ ಆಯೋಗವೇ ಹೊಣೆ ಎಂದಿದೆ. ಮೋದಿ ಏನು ಕಡಿದು ಕಟ್ಟೆಹಾಕುವ ಕೆಲಸ ಮಾಡಿದ್ದಾರೆ? ಕೆಲವು ಮೀಡಿಯಾದವರಿಗೆ ಮೋದಿಯನ್ನು ಹೊಗಳುವುದೇ ಒಂದು ಕೆಲಸವಾಗಿದೆ. ಉತ್ತರಾಖಂಡದಲ್ಲೊಬ್ಬ ಮೂರ್ಖ ಮುಖ್ಯಮಂತ್ರಿ ಇದ್ದಾನೆ. ಕುಂಭಮೇಳದಿಂದ ಕೋವಿಡ್ ಬರಲಿಲ್ಲವಂತೆ. ಈ ಬಗ್ಗೆ ಪ್ರಧಾನಿ ಹೊಗಳ್ತಾರೆ. ಪ್ರೈಮ್ ಮಿನಿಸ್ಟರ್ ಈ ರೀತಿ ಹೊಗಳುತ್ತಾರಾ? ಕೋವಿಡ್ ಇರೋದು ಇವರಿಗೆ ಗೊತ್ತಿರಲಿಲ್ವೇ? ಕುಂಭಮೇಳಕ್ಕೆ ಪ್ರಧಾನಿ ಅವಕಾಶ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರು.
ದೇವಿಶೆಟ್ಟಿ ಎಚ್ಚರಿಸಿದರೂ ಸರ್ಕಾರ ನಿರ್ಲಕ್ಷ್ಯ ಮಾಡಿದ್ಯಾಕೆ?
ಕೊರೊನಾ ಟೆಸ್ಟ್ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ದೇವಿಶೆಟ್ಟಿ ಕೊರೊನಾ ಬಗ್ಗೆ ಹಿಂದೆಯೇ ಎಚ್ಚರಿಸಿದ್ದರು. ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಸಾವು ನೋವಿನ ಸಂಖ್ಯೆ ಹೆಚ್ಚಾಗ್ತಿದೆ. ರೆಮಿಡಿಸಿವರ್ ಇಂಜೆಕ್ಷನ್ ಸಿಗ್ತಿಲ್ಲ. ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಸಿಗ್ತಿಲ್ಲ. ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಇಲ್ಲ. ಸೋನಿಯಾ, ಮನಮೋಹನ್ ಸಿಂಗ್ ಸಮಸ್ಯೆಗಳ ಬಗ್ಗೆ ಪ್ರಧಾನಿಗೆ ಪತ್ರ ಬರೆದ್ರು. ಆದರೂ ಪ್ರಧಾನಿ ಕ್ರಮ ಕೈಗೊಳ್ಳಲಿಲ್ಲ. ಇಲ್ಲಿ ಸಿಎಂ ಮಾತು ಆರೋಗ್ಯ ಸಚಿವರು ಕೇಳಲ್ಲ, ಸಚಿವರ ಸಲಹೆ ಸಿಎಂ ಪರಿಗಣಿಸಲ್ಲ ಎಂದು ಸಿಎಂ, ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬರೆದ ಪತ್ರಕ್ಕೆ ಇನ್ನೂ ಬಂದಿಲ್ಲವಂತೆ ಉತ್ತರ
ಪಿಎಂ ಕೇರ್ಸ್ ಫಂಡ್ಗೆ ಎಷ್ಟು ಹಣ ಬಂದಿದೆ ಎಂದು ಕೇಳಿ ನಾನು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದೆ. ಅದರ ಬಗ್ಗೆ ಇನ್ನೂ ಮಾಹಿತಿಯಿಲ್ಲ ಅಂತಿದ್ದಾರೆ. ಈಗ ಸತ್ತವರು ಬಹುತೇಕರು ಯುವಜನರೇ. ಯುವಜನರಿಗೇ ಹೆಚ್ಚು ಸೋಂಕು ತಗುಲುತ್ತಿದೆ. ಈಗ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಕೊಡಲಿ. ಎಲ್ಲಾ ವಯೋಮಿತಿಯವರಿಗೂ ಲಸಿಕೆ ಕೊಡಿ, ದೇಶದಲ್ಲಿ 135 ಕೋಟಿ ಜನರಿದ್ದಾರೆ. ಮಕ್ಕಳು ಬಿಟ್ಟು 100 ಕೋಟಿ ಜನರಿಗೆ ಲಸಿಕೆ ಹಾಕಿ. ಇದಕ್ಕೆ ಸುಮಾರು 2 ಲಕ್ಷ ಕೋಟಿ ರೂ. ಬರಬಹುದು. ಪ್ರತಿ ಕುಟುಂಬಕ್ಕೆ 10 ಸಾವಿರ ಕೊಡಿ ಎಂದು ಹೇಳಿದ್ದೆ. ಸರ್ಕಾರ ನನ್ನ ಸಲಹೆಯನ್ನ ಪರಿಗಣಿಸಲಿಲ್ಲ. ಅಂದೇ ದುಡಿದು ಅಂದೇ ತಿನ್ನುವವರ ಪಾಡೇನು? ಇಂದಿರಾ ಕ್ಯಾಂಟೀನ್ಗಳನ್ನೂ ಮುಚ್ಚುತ್ತಿದ್ದಾರೆ. ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡ್ತಿದೆ ಎಂದು ಹರಿಹಾಯ್ದರು.
ಆಸ್ಪತ್ರೆಗಳಲ್ಲಿ ಹಾಸಿಗೆಗಳೇ ಸಿಗ್ತಿಲ್ಲ. ನನ್ನ ಕೋ-ಬ್ರದರ್ಗೆ ಬೆಡ್ ಸಿಗಲಿಲ್ಲ. ಪ್ರಿಸ್ಟಿನ್ ಆಸ್ಪತ್ರೆಯಲ್ಲಿ ಜನರಲ್ ವಾರ್ಡ್ಗೆ ಹಾಕಿದ್ದರು. ಮತ್ತೆ ನಾನು ರಾಮಯ್ಯ ಆಸ್ಪತ್ರೆಗೆ ಕಳಿಸಬೇಕಾಯ್ತು. ಧರ್ಮಸಿಂಗ್ ಪತ್ನಿಗೂ ಕೋವಿಡ್ ಬಂದು ಹಾಸಿಗೆ ಸಿಗಲಿಲ್ಲ. ಅವರಿಗೂ ನಾನೇ ರೆಫರ್ ಮಾಡಿ ಹಾಸಿಗೆ ಕೊಡಿಸಬೇಕಾಯ್ತು. ಹಾಸಿಗೆಗೆ ರೆಫರ್ ಮಾಡ್ಬೇಕು ಅಂದ್ರೆ ನೀವೇ ತಿಳಿಯಿರಿ ಎಂದು ಹೇಳುವ ಮೂಲಕ ಹಾಸಿಗೆ ಸಮಸ್ಯೆಯನ್ನ ತೆರೆದಿಟ್ಟರು.
ಸರ್ಕಾರಕ್ಕೆ ಸಹಕಾರ ಕೊಡ್ತೇವಿ... ಆದ್ರೆ?
ನಾವು ಸರ್ಕಾರಕ್ಕೆ ಸಹಕಾರ ಕೊಡ್ತೇವೆ. ಅದಕ್ಕಾಗಿಯೇ ರಾಜ್ಯಪಾಲರ ಸಭೆಯಲ್ಲಿ ಭಾಗಿಯಾಗಿದ್ವಿ. ಅವರಿಗೆ ಅಧಿಕಾರವಿಲ್ಲದಿದ್ರೂ ಸಭೆ ಕರೆದಿದ್ರು. ಹಲವು ಸಲಹೆಗಳನ್ನ ನಾವು ಕೊಟ್ಟಿದ್ದೇವೆ. ಅಸಂಘಟಿತ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಗಾರ್ಮೆಂಟ್ಸ್ ಮುಚ್ಚಿದ್ದಾರೆ. ಅಲ್ಲಿನ ಉದ್ಯೋಗಿಗಳ ಜೀವನ ಹೇಗೆ? 14 ದಿನ ಆಗುತ್ತೋ ತಿಂಗಳೇ ಆಗುತ್ತೋ ಗೊತ್ತಿಲ್ಲ. ಪ್ರಧಾನಿ 5 ಕೆ.ಜಿ ಅಕ್ಕಿ ಕೊಡ್ತೇನೆ ಅಂತಾರೆ. ರಾಜ್ಯದಲ್ಲಿ 10 ಕೆ.ಜಿ ಉಚಿತ ಅಕ್ಕಿ ಕೊಡಬೇಕು. ಕೋವಿಡ್ ಮುಗಿಯುವವರೆಗೆ ಆಹಾರ ಧಾನ್ಯ ಕೊಡಬೇಕು ಎಂದು ಒತ್ತಾಯಿಸಿದರು.
ತಜ್ಞರ ವರದಿಯಂತೆ ನಿರ್ಧಾರ ಮಾಡಿ ಎಂದಿದ್ದೆವು. ನಾವು ಲಾಕ್ ಡೌನ್ ಮಾಡಿ, ಇಲ್ಲವೇ ಮಾಡಬೇಡಿ ಎಂದಿರಲಿಲ್ಲ. ವಲಸಿಗರು ಊರಿಗೆ ತೆರಳಲು ವ್ಯವಸ್ಥೆ ಮಾಡಿ. ಉಚಿತವಾಗಿ ಅವರನ್ನ ಊರಿಗೆ ಸೇರಿಸಿ. ಹೋದವರಿಗೆ ಹಳ್ಳಿಗಳಲ್ಲಿ ನರೇಗಾದಡಿ ಕೆಲಸ ಕೊಡಿ. ಜೀವನ ಕಷ್ಟವಾದವರಿಗೆ ಆಹಾರವಸ್ತುಗಳನ್ನ ನೀಡಿ, ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ, ಮೊದಲು ಆಕ್ಸಿಜನ್, ವೆಂಟಿಲೇಟರ್ ಒದಗಿಸಿ ಎಂದರು.
ಸರ್ಕಾರದ ವರದಿಗೂ ಸ್ಮಶಾನದಲ್ಲಿ ಬರುವ ಹೆಣಗಳ ಲೆಕ್ಕಕ್ಕೂ ಅಜಗಜಾಂತರ
ಸರ್ಕಾರ ನೀಡುತ್ತಿರುವ ಸಾವಿನ ಸಂಖ್ಯೆ ಸ್ಮಶಾನದಲ್ಲಿ ಕೊಡುವ ಸಂಖ್ಯೆಗೂ ವ್ಯತ್ಯಾಸ ಇದೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕೂಡ ಸರಿಯಾಗಿ ನೀಡ್ತಾ ಇಲ್ಲ. ಸಾವಿನ ಸಂಖ್ಯೆಯೂ ಸರಿಯಾಗಿ ನೀಡ್ತಾ ಇಲ್ಲ. ರಾಜ್ಯಪಾಲರು ಸಭೆ ಕರೆದ ವಿಚಾರವಾಗಿ ಸಿ.ಟಿ. ರವಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿ, ಸಿ.ಟಿ. ರವಿಗೆ ಸಂವಿಧಾನ ಏನಿದೆ ಗೊತ್ತಿಲ್ಲ. ರಾಜ್ಯಪಾಲರು ಸಭೆ ಕರೆಯುವಂತಿಲ್ಲ. ಅದನ್ನೇ ನಾನು ಹೇಳಿದ್ದೆ, ಅದನ್ನ ತಿಳಿಯಲಿ. ರಾಜ್ಯಪಾಲರನ್ನ ನೇಮಿಸೋದು ಸರ್ಕಾರ ಎಂದರು.
ಆರೋಗ್ಯ ಸಚಿವರ ವೈಫಲ್ಯ ವಿಚಾರ ಮಾತನಾಡಿ, ನನಗೇನು ಸುಧಾಕರ್ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ. ಆರೋಗ್ಯ ಸಚಿವರದ್ದೂ ವೈಫಲ್ಯವಿದೆ. ಇಡೀ ಸರ್ಕಾರದ ವೈಫಲ್ಯ ಎದ್ದು ಕಾಣ್ತಿದೆ. ಇಡೀ ಸರ್ಕಾರವೇ ವಿಫಲವಾಗಿದೆ ಎಂದು ಹೇಳಿದರು.