ಬೆಂಗಳೂರು: ನಗರದಲ್ಲಿ ಹಬ್ಬಿರುವ ಕೊರೊನಾ ಸಾಂಕ್ರಾಮಿಕ ವೈರಾಣು ಸರಪಳಿ ಮುರಿಯಲು ಇಂದು ರಾತ್ರಿ 9 ಗಂಟೆಯಿಂದ ಕರ್ಫ್ಯೂ ಜಾರಿಗೆ ಬರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಓಡಾಡದಂತೆ ಎಚ್ಚರ ವಹಿಸಲು ನಗರ ಪೊಲೀಸರು ಮುಂದಾಗಿದ್ದಾರೆ.
9 ಗಂಟೆಯಾಗುತ್ತಿದ್ದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಅನಗತ್ಯ ವಾಹನ ಸಂಚಾರ ತಡೆಯಲಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ನೈಟ್ ಹಾಗೂ ವಾರಂತ್ಯ ಕರ್ಫ್ಯೂ ಜಾರಿ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ನಿನ್ನೆ ರಾಜ್ಯ ಸರ್ಕಾರದಿಂದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಇಂದು ರಾತ್ರಿ 9 ಗಂಟೆಗೆಯಿಂದ ಮೇ 4ರ ಬೆಳಗ್ಗೆವರೆಗೂ ಕೆಲ ನಿಬಂಧನೆಗಳು ಜಾರಿಯಲ್ಲಿ ಇರುತ್ತವೆ. ನೈಟ್ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಇರುತ್ತದೆ. ರಾತ್ರಿ ವೇಳೆ ಪ್ರಯಾಣಿಕರು ಟಿಕೆಟ್ ತೋರಿಸಿ ಪ್ರಯಾಣ ಮಾಡಬಹುದು. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6ರ ತನಕ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಶೇ. 99.99ರಷ್ಟು ಯಾವುದೇ ಚುಟುವಟಿಕೆಗಳು ಎರಡು ದಿನಗಳ ಕಾಲ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆ, ಸಮಾರಂಭಗಳು ಧಾರ್ಮಿಕ ಕಾರ್ಯಕ್ರಮಗಳಿಗೆ ಸಹ ಯಾವುದೇ ಅವಕಾಶವಿಲ್ಲ. ಹೊರಗಡೆ ಬಂದು ಉತ್ಸವದ ರೀತಿ ಮಾಡುವಂತಿಲ್ಲ. ರೆಸ್ಟೋರೆಂಟ್, ಹೋಟೆಲ್ಗಳಿಂದ ಪಾರ್ಸಲ್ಗೆ ಮಾತ್ರ ಅವಕಾಶ ಇರುತ್ತದೆ. ಐಪಿಸಿ 144 ಸೆಕ್ಷನ್ ಪ್ರಕಾರ ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹೊರತುಪಡಿಸಿ ಬೇರೆ ಕಡೆ 4ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಬಸ್ಗಳಲ್ಲಿ 50ರಷ್ಟು ಮಾತ್ರ ಪ್ರಯಾಣಿಕರು ಇರಬೇಕು. ಮದುವೆ, ಚಿತಾಗಾರಗಳ ಬಳಿ ಕಾರ್ಯದರ್ಶಿಯವರ ಮಾರ್ಗಸೂಚಿ ಅನ್ವಯ ಇರುತ್ತದೆ. ಆದೇಶ ಪಾಲನೆ ಮಾಡದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಮ್ಮ ಅಧಿಕಾರಿಗಳ ಜತೆ, ಕಲ್ಯಾಣ ಮಂಟಪ ಮಾಲೀಕರ ಜತೆ ಮಾತುಕತೆ ನಡೆಸಲಾಗುತ್ತದೆ. ಅಪರಾಧ ದಂಡ ಸಂಹಿತೆ (ಸಿಆರ್ಪಿಸಿ) 107ರ ಪ್ರಕಾರ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗುವುದು. ಒಂದು ವೇಳೆ ಉಲ್ಲಂಘನೆ ಮಾಡಿದರೆ ಬಾಂಡ್ ಜಪ್ತಿ ಮಾಡಲಾಗುವುದು. ಈಗಾಗಲೇ ಕೆಲ ಮಾಲ್ಗಳು ಮತ್ತು ಕಲ್ಯಾಣ ಮಂಟಪಗಳನ್ನು ಜಪ್ತಿ ಮಾಡಲಾಗಿದೆ. ಕೋವಿಡ್ ಉಲ್ಲಂಘನೆ ತಡೆಯಲು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ಗೆ ಉಸ್ತುವಾರಿ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆತಂಕ ಪಡುವ ಅಗತ್ಯವಿಲ್ಲ
ನಗರದಲ್ಲಿ ನಮ್ಮ ಪೊಲೀಸ್ ಅಧಿಕಾರಿಗಳು ಸಹ ಕೋವಿಡ್ ಕೆಲಸದಲ್ಲಿ ನಿರತರಾಗಿದ್ದಾರೆ. ಸೋಂಕಿತ ಪೊಲೀಸರಿಗೆ ಸಹ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಿಬ್ಬಂದಿ ಆತಂಕ ಪಡುವ ಅಗತ್ಯವಿಲ್ಲ. ಇಂದು 100ಕ್ಕೂ ಹೆಚ್ಚು ಆಸ್ಪತ್ರೆಗಳೊಂದಿಗೆ ಸಭೆ ನಡೆಸಲಾಗಿದೆ. ಅವರು ಸಹ ಕೆಲ ವಿಷಯಗಳನ್ನು ಹೇಳಿದ್ದಾರೆ. ಆಕ್ಸಿಜನ್, ವ್ಯಾಕ್ಸಿನ್ ಉತ್ತಮ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ವೀಕೆಂಡ್ನಲ್ಲಿ ಪಾಸ್ ಇರಲ್ಲ
ಶನಿವಾರ, ಭಾನುವಾರ ಯಾವುದೇ ಪಾಸ್ ನೀಡುವುದಿಲ್ಲ. ನಿಮ್ಮ ಬಳಿ ಇರುವ ಐಡಿ ಕಾರ್ಡ್ ತೋರಿಸಬೇಕು. ಸುಖಾಸುಮ್ಮನೆ ಓಡಾಡುವಂತಿಲ್ಲ. ಕಾನೂನು ಉಲ್ಲಂಘನೆ ಮಾಡಿದರೆ ಬೈಕ್ ಜಪ್ತಿ ಮಾಡಲಾಗುವುದು. ಜನರು ಪರಿಸ್ಥಿತಿ ಅರ್ಥ ಮಾಡಿಕೊಂಡು ಸಹಕರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ನಮ್ಮ ನಮ್ಮ ಮನೆಯವರಿಗಾಗಿ ಎಲ್ಲರೂ ಆದೇಶ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ಅಂಬುಲೈನ್ಸ್ನವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೃತಕ ಅಭಾವ ಸೃಷ್ಟಿಸಿ ಈಗಾಗಲೇ ರೆಮ್ಡೆಸಿವಿರ್ ಮಾತ್ರೆಗಳ ಅಕ್ರಮ ಮಾರಾಟದ ಬಗ್ಗೆ ನಮಗೆ ಮಾಹಿತಿ ಬಂದ ಹಿನ್ನೆಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಈ ತಿಂಗಳಲ್ಲಿ 218 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 13 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಲಸಿಕೆ ಪಡೆದಿದ್ದರಿಂದ ಖಂಡಿತವಾಗಿಯೂ ಉಪಯೋಗವಾಗಿದೆ ಎಂದರು.