ಬೆಂಗಳೂರು: ಇಂದು ವಿಧಾನಮಂಡಲದ ಉಭಯ ಸದನಗಳಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಹಾಗೂ ಆರು ಮಂದಿ ಸಚಿವರು ನ್ಯಾಯಾಲಯ ಮೊರೆ ಹೋಗಿರುವ ವಿಚಾರ ಪ್ರಸ್ತಾಪಿಸಿ ಚರ್ಚೆ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, 6 ಹಾಲಿ ಸಚಿವರು ನ್ಯಾಯಾಲಯದ ಮೊರೆ ಹೋಗಿ ಮಾಧ್ಯಮಗಳು ಹಾಗೂ ಇತರರ ವಿರುದ್ಧ ನಿರ್ಬಂಧಕಾಜ್ಞೆಯನ್ನು ತಂದಿರುವ ವಿಚಾರವಾಗಿ ಚರ್ಚೆ ನಡೆಸಲು ನಿರ್ಧರಿಸಿದ್ದಾರೆ. ಒಂದೊಮ್ಮೆ ಅವಕಾಶ ಲಭಿಸದಿದ್ದಲ್ಲಿ ಧರಣಿಗೆ ಮುಂದಾಗಲು ತೀರ್ಮಾನಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿಗೆ ಸಜ್ಜಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ಗಂಭೀರ ಲೋಪಗಳನ್ನು ಎಸಗುತ್ತಿದೆ ಎಂದು ಟೀಕಾಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಘನತೆಗೆ ಕುಂದು ತರುತ್ತಿರುವ ಸರ್ಕಾರದ ನಿಲುವುಗಳ ವಿರುದ್ಧ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿರುವ ಅವರು, ನಿಲುವಳಿ ಸೂಚನೆಯ ನೋಟಿಸ್ನಲ್ಲಿ ಪ್ರಕರಣದ ಬಗ್ಗೆ ಸುದೀರ್ಘ ವಿವರಣೆ ನೀಡಿದ್ದಾರೆ.
ಸರ್ಕಾರದ ವರ್ತನೆ ಪಾರದರ್ಶಕವಾಗಿಲ್ಲ:
ಇತ್ತೀಚೆಗೆ ರಾಜ್ಯದ 6 ಜನ ಹಾಲಿ ಸಚಿವರುಗಳು ಮಾಧ್ಯಮಗಳ ಮೂಲಕ ತಮ್ಮ ಕುರಿತಾದ ಸಿಡಿ ಬಿಡುಗಡೆ ಮಾಡಬಹುದು ಎಂದು ನ್ಯಾಯಾಲಯದ ಮೊರೆ ಹೋಗಿ 67 ಮಾಧ್ಯಮಗಳು ಹಾಗೂ ಇತರರ ವಿರುದ್ಧ ನಿರ್ಬಂಧಕಾಜ್ಞೆಯನ್ನು ತಂದಿದ್ದಾರೆ. ಈ ಕಾರಣದಿಂದ ರಾಜ್ಯದ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿದೆ. ಈ ವಿಚಾರವಾಗಿ ನಿತ್ಯ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ರೀತಿಯ ವರ್ಣರಂಜಿತ ಸುದ್ದಿಗಳು ಪ್ರಸಾರವಾಗುತ್ತಿವೆ. ಈ ವಿದ್ಯಮಾನಗಳಿಂದ ಮಹಿಳೆಯರು, ಮಕ್ಕಳು, ಯುವಕ, ಯುವತಿಯರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಲೈಂಗಿಕ ಸಿಡಿಯ ವಿಚಾರವಾಗಿ ಎಫ್.ಐ.ಆರ್ ದಾಖಲಾಗುವ ಮೊದಲೇ ಎಸ್ಐಟಿ ತಂಡ ರಚಿಸಿ, ಲೈಂಗಿಕ ಹಗರಣದ ತನಿಖೆಗೆ ಆದೇಶಿಸಲಾಗಿದೆ. ಎಸ್ಐಟಿಯ ಇದುವರೆಗಿನ ತನಿಖೆಯನ್ನು ನೋಡಿದರೆ ಸಿಡಿ ಪ್ರಚಾರವಾಗಲು ಕಾರಣಕರ್ತರು ಯಾರು ಎಂಬುದನ್ನು ಹುಡುಕುವ ದಿಕ್ಕಿನೆಡೆ ತನಿಖೆ ಸಾಗುತ್ತಿದೆ ಎಂಬ ಅನುಮಾನ ಬರುತ್ತಿದೆ. ಸರ್ಕಾರ ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ಗಂಭೀರ ಲೋಪಗಳನ್ನು ಎಸಗುತ್ತಿದ್ದು, ಸರ್ಕಾರದ ವರ್ತನೆ ಪಾರದರ್ಶಕವಾಗಿಲ್ಲ ಮತ್ತು ನ್ಯಾಯ ಸಮ್ಮತವಾಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಲು ಮುಂದಾಗಿದ್ದಾರೆ.