ಬೆಂಗಳೂರು: ದೆಹಲಿ ಮಹಾರಾಷ್ಟ್ರದಲ್ಲಿ ಈಗಾಗಲೇ ಲಾಕ್ಡೌನ್ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಯಾವ ರೀತಿ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಜನವರಿ 7 ರಂದು ನಡೆಯುವ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.7 ರಂದು ತಾಂತ್ರಿಕ ಸಲಹಾ ಸಮಿತಿಯ ಸಭೆ ಇದೆ ಈಗಾಗಲೇ ಕೆಲವೊಂದು ವರದಿಯನ್ನು ಸಲ್ಲಿಕೆ ಮಾಡಲಾಗಿದೆ.
ಇದರ ಕುರಿತಾಗಿ ಸಿಎಂ, ತಜ್ಞರು ಮತ್ತು ಅಧಿಕಾರಿಗಳ ಜತೆ ಸಭೆ ಮಾಡುತ್ತಾರೆ, ಸಭೆಯಲ್ಲಿ ಶಿಫಾರಸ್ಸು ಏನಿದೆ ಎನ್ನುವುದನ್ನು ಪರಿಶೀಲಿಸಿ ಅದನ್ನ ಜಾರಿಗೊಳಿಸುವ ಕೆಲಸ ಮಾಡುತ್ತೇವೆ. ನಮಗೆ ಜನರ ಜೀವವೇ ಮುಖ್ಯ. ಈಗಾಗಲೇ ಬೇರೆ ಬೇರೆ ರಾಜ್ಯದಲ್ಲಿ ಸೊಂಕು ಹೆಚ್ಚಾಗುತ್ತಿದೆ ಕೆಲವು ಕಡೆ ಟಫ್ ರೂಲ್ಸ್ ಜೊತೆಗೆ ಲಾಕ್ಡೌನ್ ಮಾಡಲಾಗಿದೆ. ದೆಹಲಿ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಆಗಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಗಡಿಗೆ ಹೊಂದಿಕೊಂಡ ನಾವು ಹೆಚ್ಚಿನ ಕಟ್ಟೆಚ್ಚರ ವಹಿಸಬೇಕಿದೆ. ಹಾಗಾಗಿ 7 ರಂದು ನಡೆಯುವ ಸಭೆಯಲ್ಲಿ ಎಲ್ಲವೂ ನಿರ್ಧಾರ ಆಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್ಗೆ ಅಶೋಕ್ ಎಚ್ಚರಿಕೆ:
ನಾವು ಜನರ ರಕ್ಷಣೆ ಮಾಡಲು ಕಠಿಣ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಾದಯಾತ್ರೆ ಮಾಡುವುದು ಬಿಡುವುದು ಅವರಿಗೆ ಬಿಟ್ಟಿದ್ದು, ನಾವು ಸರ್ಕಾರವಾಗಿದ್ದು ನಿಯಮ ರೂಪಿಸುವ ಹಾಗೂ ಅದನ್ನ ಜಾರಿ ಮಾಡುವ ಜವಾಬ್ದಾರಿ ಹೊತ್ತಿದ್ದೇವೆ. ಪಾದಯಾತ್ರೆ ಮಾಡುತ್ತೇವೆ ಅಂದರೆ ಮಾಡಿ ಸರ್ಕಾರ ಏನು ಮಾಡಬೇಕೋ ಅದನ್ನ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ನ ಇಂದಿನ ದುಸ್ಥಿತಿಗೆ ಅವರ ಸುಳ್ಳುಗಳೇ ಕಾರಣ
ಸುಳ್ಳು ಅಂಕಿ ಅಂಶ ಕೊಡುತ್ತಿದ್ದಾರೆ ಅನ್ನೋ ಡಿಕೆ ಶಿವಕುಮಾರ್ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮಗೆ ಸುಳ್ಳು ಹೇಳುವುದಕ್ಕೆ ಬರಲ್ಲ. ಅವರು ಸುಳ್ಳು ಹೇಳಿಕೊಂಡೆ ಅರವತ್ತು ವರ್ಷ ದೇಶವಾಳಿದರು. ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷವಾಗಲೂ ಸಹ ಆಗದ ಸ್ಥಿತಿಗೆ ತಲುಪಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ್ದು ಹೊಡಿಬಡಿ ಸಂಸ್ಕೃತಿ
ರಾಮನಗರದಲ್ಲಿ ಅಶ್ವಥ್ ನಾರಾಯಣ ನಡುವೆ ಡಿಕೆ ಸುರೇಶ್ ಗಲಾಟೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ರಾಜ್ಯದಲ್ಲಿ ಹೊಡಿಬಡಿ ಸಂಸ್ಕೃತಿ ಶುರು ಮಾಡಿದ್ದಾರೆ. ಯಾವಾಗ ಕಾಂಗ್ರೆಸ್ ಸರ್ಕಾರ ಬರುತ್ತೋ ಆಗ ಹೊಡಿಬಡಿ ಸಂಸ್ಕೃತಿ ಶುರುವಾಗುತ್ತದೆ. ಇನ್ನೂ ಚುನಾವಣೆಗೆ ಒಂದು ವರ್ಷ ಇರುವಾಗಲೇ ಇವರ ಹೊಡಿಬಡಿ ಸಂಸ್ಕೃತಿ ತೋರಿಸಿದ್ದಾರೆ. ನಮ್ಮ ಜನರು ಎಲ್ಲವನ್ನೂ ನೋಡ್ತಿದ್ದಾರೆ. ಇವರಿಗೆ ಬುದ್ದಿ ಕಲಿಸುತ್ತಾರೆ.
ಈಗಲೇ ಇವರು ಇವರ ಬುದ್ದಿ ತೋರಿಸಿದ್ದು ಒಳ್ಳೆಯಾದಾಯಿತು. ಜನರು ಇವರಿಗೆ ಪಾಠ ಕಲಿಸುತ್ತಾರೆ. ಒಬ್ಬ ಸಚಿವ ಮಾತನಾಡುತ್ತಿರುವಾಗ ಬಂದು ಮೈಕ್ ಕಿತ್ತುಕೊಂಡು ಹಲ್ಲೆ ಮಾಡ್ತಾರೆ ಅಂದರೆ, ಇವರದ್ದು ಎಂತಹ ಸಂಸ್ಕೃತಿ ಅಂತ ಗೊತ್ತಾಗುತ್ತದೆ. ಅಶ್ವಥ್ ನಾರಾಯಣ್ ಮಾತನಾಡಿದರೆ ನೀವು ಏಕೆ ಕಾನೂನು ಕೈಗೆ ತಗೊಬೇಕು. ನೀವು ಒಳ್ಳೆಯ ಸಂಸದೀಯಪಟುವಾಗಿದ್ದರೆ ಮಾತಿನ ಮೂಲಕವೇ ಪೆಟ್ಟು ಕೊಡಬೇಕಿತ್ತು. ಅದುಬಿಟ್ಟು ಹಲ್ಲೆ ಮಾಡುವುದು ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಹಲ್ಲೆಗೆ ಮುಂದಾಗಿದ್ದು ಖಂಡನೀಯ: ಕಟೀಲ್