ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ನಾವೆಲ್ಲ ಆಗಾಗ ಸೇರುವ ಅನಿವಾರ್ಯತೆ ಎದುರಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದರು.
ಸೆವೆನ್ ಮಿನಿಸ್ಟರ್ ಕ್ವಾಟರ್ಸ್‌ನ ಅವರದೇ ನಿವಾಸದಲ್ಲಿ ರಮೇಶ್ ಜಾರಕಿಹೊಳಿಯವರನ್ನ ಭೇಟಿ ಮಾಡಿದ ಪುಟ್ಟಣ್ಣ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ರಮೇಶ್ ಜಾರಕಿಹೊಳಿ ಹಾಗೂ ನಾವು ಆತ್ಮೀಯ ಸ್ನೇಹಿತರು. ಹದಿನೈದು ಇಪ್ಪತ್ತು ವರ್ಷಗಳ ಒಡನಾಟವಿದೆ. ಆಗಾಗ ಸೇರುತ್ತಿರುತ್ತೇವೆ. ನಾನು ಮತ್ತು ಯೋಗೀಶ್ವರ್ ಒಂದೇ ತಾಲೂಕಿನವರು. ಆಗಾಗ ಭೇಟಿ ಕೊಡುತ್ತಿರುವುದು ಸಾಮಾನ್ಯ. ಹೆಚ್. ವಿಶ್ವನಾಥ್ ಅವರು ಕೂಡ ಶಿಕ್ಷಣ ಸಚಿವರಾಗಿದ್ದ ಸಂದರ್ಭದಿಂದಲೂ ಪರಿಚಿತರಾಗಿದ್ದಾರೆ. ನಾವು ಒಂದೆಡೆ ಸೇರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ನಿನ್ನೆಯೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೆವು. ನಾಳೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಇದಾದ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿ ಬಿಎಸ್ವೈ ಅವರನ್ನು ಭೇಟಿ ಮಾಡಿ ಚರ್ಚಿಸಲು ನಿರ್ಧರಿಸಿದ್ದೇವೆ. ನಿನ್ನೆ ರಾತ್ರಿ ಕೂಡ ನಾವು ಎಲ್ಲಾ ಒಂದೆಡೆ ಸೇರಿ ಚರ್ಚಿಸಿ, ನಂತರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದೇವೆ ಎಂದರು.
ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ವಿಚಾರಣೆ ಕೈಗೆತ್ತಿಕೊಳ್ಳಲು ವಿಳಂಬವಾಗುತ್ತಿರುವ ವಿಚಾರದ ಕುರಿತು ಮಾತನಾಡಿ, ಸುಪ್ರೀಂಕೋರ್ಟ್ನಲ್ಲಿ ಆಯೋಧ್ಯೆ ವಿಚಾರದ ಕುರಿತು ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ನಮ್ಮ ವಿಚಾರಣೆ ಕೈಗೆತ್ತಿಕೊಳ್ಳುತ್ತಿಲ್ಲ. ಬೇರೆ ಯಾವುದೇ ಕಾರಣಕ್ಕೂ ವಿಳಂಬ ಆಗುತ್ತಿಲ್ಲ. ಇದಾದ ಬಳಿಕ 370ನೇ ವಿಧಿ ಸಂಬಂಧ ವಿಚಾರಣೆ ಕೈಗೆತ್ತಿಕೊಳ್ಳುವ ಸುಪ್ರೀಂಕೋರ್ಟ್, ಆದ್ಯತೆಯ ಮೇರೆಗೆ ನಮ್ಮ ಮನವಿಯನ್ನು ಪುರಸ್ಕರಿಸಿ ವಿಚಾರಣೆ ಕೈಗೊಳ್ಳಲಿದೆ ಎಂಬ ಮಾಹಿತಿ ನಮಗೆ ಇದೆ. ಅನರ್ಹತೆಗೆ ಒಳಗಾದ ಶಾಸಕರಲ್ಲಿ ಹಲವರು ನಮ್ಮ ಆತ್ಮೀಯರಿದ್ದಾರೆ. ಎಲ್ಲರ ಜೊತೆ ಸಂಪರ್ಕದಲ್ಲಿದ್ದೇವೆ ಎಂದರು.
ಇನ್ನು ಫೋನ್ ಟ್ಯಾಪಿಂಗ್ ವಿಚಾರ ಮಾತನಾಡಿ, ವೈಯಕ್ತಿಕವಾಗಿ ನಾವು ಯಾರ ಜೊತೆ ಮಾತನಾಡುತ್ತೇವೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ. ನಮ್ಮೆಲ್ಲರ ಫೋನ್ ಟ್ಯಾಪ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೆ ಇದು ಕಾನೂನು ಬಾಹಿರ ಕೃತ್ಯ. ಸಂವಿಧಾನದತ್ತವಾಗಿ ಪ್ರಮಾಣವಚನ ಸ್ವೀಕರಿಸಿ, ಕಾನೂನುಬಾಹಿರವಾಗಿ ಇಂತಹ ಕ್ರಮ ಕೈಗೊಳ್ಳುವುದು ಯಾರಿಗೂ ಶೋಭೆ ತರುವುದಿಲ್ಲ. ಇಂತ ಕಾರ್ಯವನ್ನು ಯಾರೇ ಮಾಡಿದ್ದರೂ ಅದು ತಪ್ಪು. ಈ ವಿಚಾರವಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಫೋನ್ ಟ್ಯಾಪ್ ಯಾರು ಮಾಡಿದ್ದಾರೆ ಅವರು ಬಯಲಿಗೆ ಬರುತ್ತಾರೆ ಅಷ್ಟೇ ಎಂದರು.