ಬೆಂಗಳೂರು: ಪೋಲಿಯೋ ಲಸಿಕೆ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುವದಂತಿಗಳು ಹರಡುತ್ತಿರುವುದರ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಪೋಲಿಯೋ ಲಸಿಕೆ ಬಗ್ಗೆ ಸುಳ್ಳು ವದಂತಿಗಳು ಹರಡುತ್ತಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗಮನಕ್ಕೆ ಬಂದಿದ್ದು, ಇದು ತಪ್ಪು ಮಾಹಿತಿ. ಈ ರೀತಿಯಾ ಸಂದೇಶದಲ್ಲಿ ಯಾವುದೇ ಸತ್ಯಾಂಶ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಹಾಗು ಪೋಲಿಯೋ ಲಸಿಕೆ ಕಾರ್ಯಕ್ರಮವು ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಈಗಾಗಲೇ ಭಾರತವು ಪೋಲಿಯೋ ಮುಕ್ತ ರಾಷ್ಟ್ರ ಎಂಬ ಬಿರುದನ್ನು 2014 ರಲ್ಲಿ ವಿಶ್ವ ಸಂಸ್ಥೆಯಿಂದ ಪಡೆದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಹಲವು ಬಾರಿ ಪೋಲಿಯೋ ಲಸಿಕೆಯು ಸುರಕ್ಷಿತ ಎಂದು ತಿಳಿಸಿದೆ ಎಂದು ಸ್ಪಷ್ಟನೆ ನೀಡಿತು.
ಈ ಲಸಿಕೆಯ ಕುರಿತು ಯಾವುದೇ ವದಂತಿ - ತಪ್ಪು ಮಾಹಿತಿ ಹರಡಿಸಬಾರದೆಂದು ನಿರ್ದೇಶನ ನೀಡಿದೆ. ಆದಾಗ್ಯೂ ಈ ರೀತಿಯ ಅಪಪ್ರಚಾರದಿಂದ ಪೋಷಕರ ಮನದಲ್ಲಿ ಕಾರ್ಯಕ್ರಮದ ಬಗ್ಗೆ ಗೊಂದಲ ಉಂಟಾಗುತ್ತದೆ ಹಾಗೂ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಅಡಚಣೆ ಉಂಟಾಗುತ್ತದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೇ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಮನವಿ ಮಾಡಿದೆ.