ಬೆಂಗಳೂರು: ಬೃಹತ್ ಮರವೊಂದಕ್ಕೆ ರಾಸಾಯನಿಕ ವಿಷ ಹಾಕಿ ಅದರ ತೆರವಿಗೆ ಕಿಡಿಗೇಡಿಗಳು ಹುನ್ನಾರ ನಡೆಸಿರುವ ಪ್ರಕರಣ ರಾಜರಾಜೇಶ್ವರಿ ನಗರದಲ್ಲಿ ಬೆಳಕಿಗೆ ಬಂದಿದೆ.
ರಾಜರಾಜೇಶ್ವರಿ ನಗರದ ಪಂಚಶೀಲ ಬ್ಲಾಕ್ ನ ಮನೆ ನಂ. 31ಇ, ಮಾಲೀಕರಾದ ನರೇಂದ್ರ ಹಾಗೂ ಮಾಲಿನಿ ತಮ್ಮ ಮನೆಗೆ ಅಡ್ಡಿಯಾಗುತ್ತೆ ಎಂದು ಮರವನ್ನು ಕಡಿಯಲು ಮನವಿ ಮಾಡಿದ್ದರು. ಆದ್ರೆ ಬಿಬಿಎಂಪಿ ಯಿಂದ ಅನುಮತಿ ಸಿಗದ ಹಿನ್ನಲೆ ಈ ರೀತಿಯ ಹುನ್ನಾರ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗಾಗಲೇ ಎರಡು ಮರಗಳನ್ನು ಕತ್ತರಿಸಿದ್ದು, ಇದೀಗ ಮರಕ್ಕೆ ವಿಷಹಾಕುವ ಕೆಲಸ ಮಾಡಿದ್ದಾರೆ ಎಂದು ಪಂಚಶೀಲ ಬ್ಲಾಕ್ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಷನ್ ಬಿಬಿಎಂಪಿಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ ತಪ್ಪಿತಸ್ಥರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗುವುದು. ಐವತ್ತು ಸಾವಿರದಷ್ಟು ದಂಡ ವಿಧಿಸುವ ಅವಕಾಶವೂ ಇದೆ ಎಂದು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.