ಬೆಂಗಳೂರು: ಜಯನಗರ ಸುತ್ತಮುತ್ತಲ ಪ್ರದೇಶದಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ವಾಹನಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡು ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.
ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಎಸ್.ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಪುತ್ತಿಗೆ ರಮೇಶ್, ಜಯನಗರ ಪ್ರದೇಶದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ ಅಲ್ಲಿ ತೆರವು ಕಾರ್ಯ ಆಗಿಲ್ಲ. ಮತ್ತೆ ಮಾಮೂಲಿನಂತೆ ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಲಾಗಿದೆ, ಒತ್ತುವರಿ ಹಾಗೆಯೇ ಇದೆ. ಆ ಕುರಿತಂತೆ ಇತ್ತೀಚಿನ ಫೋಟೋ ಸಹಿತ ನ್ಯಾಯಾಲಯಕ್ಕೆ ವಿವರ ಸಲ್ಲಿಸಲಾಗಿದೆ. ಅವುಗಳನ್ನು ನ್ಯಾಯಾಲಯ ಪರಿಶೀಲಿಸಬಹುದು ಎಂದರು.
ಇದಕ್ಕೆ ಬಿಬಿಎಂಪಿ, ಹಿಂದೆ ಅರ್ಜಿದಾರರು ನೀಡಿದ್ದ ಫೋಟೋ ಆಧರಿಸಿ ತೆರವು ಕಾರ್ಯ ಮಾಡಲಾಗಿತ್ತು. ವಾಹನಗಳ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು, ತೆರವು ಮಾಡಿದ ಜಾಗದಲ್ಲಿ ಪಾಟ್‌ಗಳನ್ನು ಇಟ್ಟು ಗಾರ್ಡ್‌ನ್ ನಿರ್ಮಿಸಲಾಗಿದೆ. ಆನಂತರದ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದರು.
ಜೊತೆಗೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಪ್ರಕ್ರಿಯೆ ಬೆಂಗಳೂರಿನಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಹಾಗಿದ್ದರೆ ಅರ್ಜಿದಾರರು ಫೋಟೋದಲ್ಲಿ ತಿಳಿಸಿರುವ ಜಾಗಗಳಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯ ಕೈಗೊಂಡು ಆ ಬಗ್ಗೆ ನಾಲ್ಕು ವಾರಗಳಲ್ಲಿ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಸೂಚಿಸಿ ವಿಚಾರಣೆಯನ್ನು ನ.12ಕ್ಕೆ ಮುಂದೂಡಿತು.