ಬೆಂಗಳೂರು: ಮೋಜು-ಮಸ್ತಿಗಾಗಿ ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡ್ತಿದ್ದ ಮೂವರನ್ನ ವಿಶ್ವೇಶ್ವರಪುರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನಕನಗರದ ಸದಾಂ ಹುಸೇನ್(28), ಹೆಗಡೆನಗರದ ಸೈಯದ್ ರೋಷನ್(23), ಸಾದೀಕ್ ಪಾಷಾ (20) ಬಂಧಿತರು. ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ 14 ದ್ವಿ-ಚಕ್ರ ವಾಹನ ಜಪ್ತಿ ಮಾಡಲಾಗಿದೆ. ಅವರ ಬಂಧನದಿಂದ ವಿ.ವಿ.ಪುರ, ಕುಮಾರಸ್ವಾಮಿ ಲೇಔಟ್, ಪುಟ್ಟೇನಹಳ್ಳಿ ಜೆ.ಪಿ.ನಗರ, ಕಾಟನ್ ಪೇಟೆ, ಪುಲಿಕೇಶಿನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 14 ದ್ವಿ-ಚಕ್ರವಾಹನ ಕಳ್ಳತನ ಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಸದ್ದಾಂ ಹುಸೇನ್ ವೃತ್ತಿಪರ ಕಳ್ಳತನಾಗಿದ್ದು, ಈ ಹಿಂದೆ ಹಲವು ಬಾರಿ ವಾಹನ ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿದ್ದನು. ಜಾಮೀನಿನ ಮೇಲೆ ಹೊರಬಂದ ಬಳಿಕವೂ ಈ ಕೃತ್ಯ ಮುಂದುವರಿಸಿದ್ದನು. ನ್ಯಾಯಾಲಯಕ್ಕೆ ಹಾಜರಾಗುವ ಬದಲು ತಲೆಮರೆಸಿಕೊಂಡು ಓಡಾಡುತ್ತಿದ್ದನು. ಫೆಬ್ರವರಿ 5ರಂದು ಆರೋಪಿ ದ್ವಿ-ಚಕ್ರ ವಾಹನ ಕಳ್ಳತನ ಮಾಡಿಕೊಂಡು ಸಜ್ಜನ್ ರಾವ್ ಸರ್ಕಲ್ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ತನ್ನ ಸಹಚರರಾದ ಸೈಯದ್ ರೋಷನ್ ಮತ್ತು ಸಾದಿಕ್ ಪಾಷಾ ಎಂಬುವವರ ಹೆಸರು ಬಾಯಿಬಿಟ್ಟಿದ್ದನು. ಹೀಗಾಗಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಮಂಗಳೂರು: ಮನೆಯಲ್ಲಿದ್ದ ಇಬ್ಬರು ಸಹೋದರಿಯರು ನಾಪತ್ತೆ; ದೂರು ದಾಖಲು
ಮೋಜು-ಮಸ್ತಿಗಾಗಿ ಕೃತ್ಯ: ಸದಾಂ ಹುಸೇನ್ ಈ ಹಿಂದೆ ರಸ್ತೆ ಬದಿಯಲ್ಲಿ ನೈಟ್ ಪ್ಯಾಂಟ್ ಮಾರಾಟ ಮಾಡುತ್ತಿದ್ದನು. ಅದರಿಂದ ಬರುವ ಹಣ ದುಶ್ಚಟಗಳಿಗೆ ಸಾಲದ ಕಾರಣ ವಾಹನ ಕಳ್ಳತನ ಕೃತ್ಯಕ್ಕೆ ಇಳಿದಿದ್ದಾನೆ. ಸೈಯದ್ ರೋಷನ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಐದಾರು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಮತ್ತೆ ಕೃತ್ಯವೆಸಗುತ್ತಿದ್ದನು. ಸಾದಿಕ್ ಪಾಷಾ ಸೂಚನೆ ಮೇರೆಗೆ ಇಬ್ಬರು ವಾಹನ ಕಳ್ಳತನ ಮಾಡುತ್ತಿದ್ದರು. ನಂತರ ಮೂವರು ಸೇರಿ ಕಡಿಮೆ ಮೊತ್ತಕ್ಕೆ ವಾಹನಗಳ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.