ಬೆಂಗಳೂರು: ಆನ್ಲೈನ್ ಮೂಲಕ ಮನೆ ಮನೆಗೂ ಮದ್ಯ ಪೂರೈಕೆ ಮಾಡಲಾಗುತ್ತೆ ಎಂದು ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಹೆಚ್. ನಾಗೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಾಟಾಳ್ ನಾಗರಾಜ್ ಅವರು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಚಿವರ ಪ್ರತಿಕೃತಿಗೆ ಮದ್ಯದ ಅಭಿಷೇಕ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ರು.
ಸಚಿವ ನಾಗೇಶ್ ಹೇಳಿಕೆಗೆ ನನ್ನ ಸಂಪೂರ್ಣ ವಿರೋಧವಿದೆ. ಜನಸೇವೆಯಲ್ಲಿ ಇರುವವರು ಈ ರೀತಿ ಮಾತನಾಡಬಾರದು. ಇತಿಹಾಸದಲ್ಲಿ ಯಾವೊಬ್ಬ ಅಬಕಾರಿ ಸಚಿವರೂ ಮನೆಮನೆಗೆ ಮದ್ಯ ಕಳುಹಿಸುತ್ತೇನೆ ಎಂದು ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಇಂತಹ ಮಹಾನ್ ಕೆಲಸ ಮಾಡಲು ಸಚಿವ ನಾಗೇಶ್ ಮುಂದಾಗಿದ್ದರು. ಇದನ್ನು ನಾವು ಖಂಡಿಸುತ್ತೇವೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.
ಇನ್ನು ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಜೊತೆ ವಿವಿಧ ಸಂಘಟನೆ ಮುಖಂಡರು ಭಾಗಿಯಾಗಿ, ಸಚಿವ ನಾಗೇಶ್ ಪ್ರತಿಕೃತಿಗೆ ಮದ್ಯಾಭಿಷೇಕ ಮಾಡಿದರು.