ಬೆಂಗಳೂರು: ನಗರದಲ್ಲಿ ಕೋವಿಡ್ ಮೂರನೇ ಅಲೆಯ ಅಪಾಯದಿಂದ ಪಾರಾಗಲು ವ್ಯಾಕ್ಸಿನ್ ವಿತರಣೆಯನ್ನೇ ಪ್ರಮುಖ ಅಸ್ತ್ರವಾನ್ನಾಗಿಸಿದೆ ಬಿಬಿಎಂಪಿ. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಣೆ ಮಾಡುವ ಉದ್ದೇಶವನ್ನು ಆರಂಭದಲ್ಲಿ ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮನೆ-ಮನೆ (ಡೋರ್ ಟು ಡೋರ್ ಸರ್ವೇ) ಸರ್ವೇ ನಡೆಸಿರುವ ಬಿಬಿಎಂಪಿ ಶೇ.60 ರಷ್ಟು ಸರ್ವೇ ಕಾರ್ಯ ಮುಗಿಸಿದ್ದು ಮಧ್ಯಂತರ ವರದಿ ನೀಡಿದೆ.
ನಗರದಲ್ಲಿ 23,85,266 ಮನೆಗಳಿದ್ದು, 14,46,505 (ಶೇ.61) ಜನರ ಸರ್ವೇ ನಡೆಸಲಾಗಿದೆ. 45 ವರ್ಷ ಮೇಲ್ಪಟ್ಟ 18,58,719 ಜನರಲ್ಲಿ 12,96,282 ಜನರು ಒಂದು ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಆದರೆ ಶೇಕಡಾ 33 ರಷ್ಟು ಅಂದರೆ 6,14,175 ಮಂದಿ ಇನ್ನೂ ಕೂಡಾ ಸಿಂಗಲ್ ಡೋಸ್ ವ್ಯಾಕ್ಸಿನ್ ಪಡೆದಿಲ್ಲ.
ವ್ಯಾಕ್ಸಿನ್ ಪಡೆದವರ ವಲಯವಾರು ವಿವರ
ಪಶ್ಚಿಮ 2,05619 1,67,940 (ಶೇ.45) ಶೇ.65
ದಕ್ಷಿಣ 4,83,793 1,93,645(ಶೇ.29) ಶೇ.62
ಬೊಮ್ಮನಹಳ್ಳಿ 1,97,817 74,183(ಶೇ.27) ಶೇ.35
ದಾಸರಹಳ್ಳಿ 35,083 13,633(ಶೇ.28) ಶೇ.62
ಮಹದೇವಪುರ 1,29,103 41,678(ಶೇ.24) ಶೇ.52
ಯಲಹಂಕ 1,04,265 38,201(ಶೇ.31) ಶೇ.86
ಆರ್ ಆರ್ ನಗರ 1,40,265 84,895(ಶೇ.42) ಶೇ.81
ಒಟ್ಟು 12,96,282 6,14,175(ಶೇ.33) ಶೇ.61
ಪೂರ್ವ ವಲಯದಲ್ಲಿ ಕೊಳಗೇರಿ ಮನೆಗಳಲ್ಲಿ ಮಾತ್ರ ಸರ್ವೇ ನಡೆಸಿಸಿದ್ದು, 45 ವರ್ಷ ಮೇಲ್ಪಟ್ಟ 51,910 ಜನರ ಪೈಕಿ, 16,745 ಮಂದಿಗೆ ಒಂದು ಡೋಸ್ ವ್ಯಾಕ್ಸಿನ್ ನೀಡಲಾಗಿದ್ದು, ಇನ್ನೂ 34,817 ಜನ ಒಂದು ಡೋಸ್ ಸಹ ಪಡೆದಿಲ್ಲ.
ಈ ಬಗ್ಗೆ ಈಟಿವಿ ಭಾರತ್‌ಗೆ ಮಾಹಿತಿ ನೀಡಿದ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ರಂದೀಪ್ ಡಿ, ನಗರದಲ್ಲಿ ಬೇರೆ ಬೇರೆ ವರ್ಗಗಳಿಗೆ ವ್ಯಾಕ್ಸಿನೇಷನ್ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜನರಿಗೂ ವ್ಯಾಕ್ಸಿನ್ ಕೊಡಬೇಕೆಂದಾಗ ಎಷ್ಟು ಜನಕ್ಕೆ ವ್ಯಾಕ್ಸಿನ್ ಆಗಿದೆ, ಎಷ್ಟು ಜನರಿಗೆ ಕೊಡಬೇಕಿದೆ ಎಂಬ ವಾರ್ಡ್ ವಾರು ಮೈಕ್ರೋಪ್ಲಾನ್ ಮಾಡಲು ಮಾಹಿತಿ ಸರ್ವೇಯಿಂದ ಗೊತ್ತಾಗಲಿದೆ ಎಂದು ಹೇಳಿದರು.
ವ್ಯಾಕ್ಸಿನೇಷನ್ ಸಂಪೂರ್ಣಗೊಂಡ ಶೇ.33 ರಷ್ಟು ಜನರ ಮಾಹಿತಿ ಕೋವಿನ್ ಪೋರ್ಟಲ್ ನಲ್ಲಿಯೂ ನಮೂದಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಪಡೆದವರ ಕೆಲವು ಮಾಹಿತಿ ದಾಖಲಾಗಿಲ್ಲ, ಹೀಗಾಗಿ ಇದರ ಸಂಪೂರ್ಣ ಮಾಹಿತಿ ಪಡೆಯಲು ಮನೆ ಮನೆಗೆ ಸರ್ವೇ ನಡೆಸಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲೂ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಪತ್ತೆ- ಆರೋಗ್ಯ ಸಚಿವ ಡಾ.ಸುಧಾಕರ್
ಮಾಹಿತಿ ಕೊಡಲು ನಿರ್ಲಕ್ಷ್ಯ
ಮನೆ ಮನೆ ಸರ್ವೇ ನಡೆಸಲು ಶಿಕ್ಷಕರು, ಬಿಎಲ್‌ಒಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಪ್ರತಿ ಮನೆಮನೆಗೂ ಹೋದ ಸಂದರ್ಭದಲ್ಲಿ ಹೆಚ್ಚಿನ ಕಡೆ ನಿಖರವಾದ ಮಾಹಿತಿ ನೀಡುತ್ತಿಲ್ಲ. ಬದಲಾಗಿ ನಂತರ ಬನ್ನಿ, ನಾಳೆ ಬನ್ನಿ ಎಂದು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜನರ ಆರೋಗ್ಯಕ್ಕಾಗಿ ಪಾಲಿಕೆ ಕೆಲಸ ಮಾಡುತ್ತಿರುವಾಗ ಜನರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಇದರೊಂದಿಗೆ ಕೆಲವೆಡೆ ವ್ಯಾಕ್ಸಿನ್ ಪಡೆದುಕೊಳ್ಳಲು ಇನ್ನೂ ಹಿಂಜರಿಕೆ ಇದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗ್ತಿದೆ ಎಂದರು.
ಸ್ಲಂ ಜನರಿಗೆ ವ್ಯಾಕ್ಸಿನ್
ನಗರದ ಕೊಳಚೆ ಪ್ರದೇಶಗಳಲ್ಲಿರುವ ಬಡ ಜನರಿಗೆ ಆಕ್ಟ್ ಸಂಸ್ಥೆಯ ಮೂಲಕ ಉಚಿತವಾಗಿ ವ್ಯಾಕ್ಸಿನ್ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು. ಒಟ್ಟಿನಲ್ಲಿ ಬೆಂಗಳೂರು ನಗರ ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಿ ದಾಖಲೆ ನಿರ್ಮಿಸುತ್ತಿದ್ದರೂ, ಬಹುತೇಕ ಜನರು ಒಂದು ಡೋಸ್ ವ್ಯಾಕ್ಸಿನ್ ಕೂಡಾ ಪಡೆಯದೆ, ಹೊರಗುಳಿದಿದ್ದಾರೆ. ಇನ್ನು ಮುಂದಿನ ಮೂರು ದಿನಗಳಲ್ಲಿ ಸರ್ವೇ ಸಂಪೂರ್ಣಗೊಳ್ಳಲಿದ್ದು, ನಿಖರ ಮಾಹಿತಿ ಸಿಗಲಿದೆ.