ಬೆಂಗಳೂರು: ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ಗೆ ನೀಡಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಸಿಎಂ ಕುಮಾರಸ್ವಾಮಿ ವಾಪಸ್ ಪಡೆದಿದ್ದಾರೆ.
ಈ ಹಿಂದೆ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷರಾಗಿ ನೇಮಕ ಮಾಡಿದ್ದ ಸಿಎಂ, ಈಗ ಅತೃಪ್ತ ಕಾಂಗ್ರೆಸ್ ಶಾಸಕರ ಬಣದಲ್ಲಿ ಗುರುತಿಸಿಕೊಂಡಿರುವ ಉಮೇಶ್ ಜಾಧವ್ ಅಧ್ಯಕ್ಷ ಸ್ಥಾನವನ್ನು ಹಠಾತ್ ಆಗಿ ವಾಪಸ್ ಪಡೆದಿದ್ದು, ಉಮೇಶ್ ಜಾಧವ್ ಬದಲಾಗಿ ಪ್ರತಾಪ ಗೌಡ ಪಾಟೀಲ್ಗೆ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದಾರೆ.


ದದ್ದಲ್ಗೆ ಅಧಿಕಾರ:
ಪ್ರತಾಪ್ ಗೌಡ ಪಾಟೀಲ್‌ರನ್ನು ಉಗ್ರಾಣ ನಿಗಮ ಅಧ್ಯಕ್ಷರಾಗಿ ನೇಮಕ ಮಾಡುವ ಜೊತೆಗೆ ಶಾಸಕ ಬಸವರಾಜ್ ದದ್ದಲ್‌ರನ್ನು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಕೂಡಲೇ ಜಾರಿಗೆ ಬರುವಂತೆ ಆದೇಶಿಸಿದ್ದಾರೆ. ಶಾಸಕ ಎನ್ಎ. ಗೋಪಾಲ ಸ್ವಾಮಿ ಅವರನ್ನು ಜಲಸಂಪನ್ಮೂಲ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.
ಇಂದು ಬರ್ತಾರಾ ಉಮೇಶ್ ಜಾಧವ್?
ಸಿಎಲ್ಪಿ ಸಭೆಗೆ ನಾಲ್ವರು ಅತೃಪ್ತ ಶಾಸಕರು ಹಾಜರಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗ್ಲೇ ಮುಂಬೈ ಬಿಟ್ಟಿರುವ ಮೂವರು ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಉಮೇಶ್ ಜಾಧವ್ ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿಯೇ ಇದ್ದಾರೆ. ಒಂದು ಮಾಹಿತಿಯ ಪ್ರಕಾರ ಇವರ ಶಾಸಕತ್ವ ಅನರ್ಹಗೊಳ್ಳುವ ಕಾರಣ ಸಭೆಗೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇನ್ನೊಂದು ಮಾಹಿತಿ ಪ್ರಕಾರ ಯಡಿಯೂರಪ್ಪ ನಡೆಸುವ ಸುದ್ದಿಗೋಷ್ಠಿಯಲ್ಲಿ ನೇರವಾಗಿ ಹಾಜರಾಗಿ ತಮ್ಮ ರಾಜೀನಾಮೆ ಸಲ್ಲಿಸುವ ಘೋಷಣೆ ಮಾಡಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ಉಳಿದವರು ಬರ್ತಾರೆ:
ಡಾ.ಸುಧಾಕರ್, ಬಿ ಸಿ ಪಾಟೀಲ್ ಕೂಡ ಸಿಎಲ್ಪಿ ಸಭೆಗೆ ಹಾಜರಾಗಲಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಏಟಿಗೆ ಶಾಸಕರು ಭಯಬಿದ್ದು ಸಭೆಗೆ ಹಾಜರಾಗುತ್ತಾರಾ ಅಥವಾ ಬಿಜೆಪಿ ಜೊತೆ ಕೈಜೋಡಿಸಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾಂದಿ ಹಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.