ಕೆ.ಆರ್.ಪುರ(ಬೆಂಗಳೂರು): ಇಂದು ಯುಜಿಸಿ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಸಹಾಯ ಪ್ರಾಧ್ಯಾಪಕ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಆಯೋಜಿಸಿತ್ತು. ಕೆ.ಆರ್ ಪುರದ ಕೇಂಬ್ರಿಡ್ಜ್ ಕಾಲೇಜಿನಲ್ಲಿ ಪರೀಕ್ಷೆಗೆ ಆಯೋಜನೆ ಮಾಡಲಾಗಿತ್ತು. ಭಾಗ ಒಂದರಲ್ಲಿ ಪ್ರಶ್ನೆ ಪತ್ರಿಕೆ ಸರಿಯಾಗಿತ್ತು. ಆದರೆ ಎರಡನೇ ಭಾಗದಲ್ಲಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 10 ಅಂಕಗಳಿಗೆ ಮಾತ್ರ ಕನ್ನಡ ಭಾಷೆಯ ಪ್ರಶ್ನೆಗಳು ಇದ್ದು, ಉಳಿದ 90 ಅಂಕಗಳಿಗೆ ಹಿಂದಿ ಭಾಷೆಯ ಪ್ರಶ್ನೆಗಳು ಇರುವುದನ್ನು ನೋಡಿ ಪರೀಕ್ಷಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಈ ಕುರಿತು ಪರೀಕ್ಷಾ ಮುಖ್ಯಸ್ಥರ ಗಮನಕ್ಕೆ ತಂದಾಗ ತಾಂತ್ರಿಕ ದೋಷದಿಂದ ಹೀಗೆ ಆಗಿದೆ. ಕೆಲವು ಸಮಯದ ನಂತರ ಸರಿಯಾಗುತ್ತೆ ಎಂದು ಹೇಳಿದರು. ನಂತರ ಕೆಲವು ಪರೀಕ್ಷಾರ್ಥಿಗಳಿಗೆ ಕನ್ನಡ ಪ್ರಶ್ನೆ ಪತ್ರಿಕೆ ಬಂದರೂ ಕೊನೆಯಲ್ಲಿ ತಾಂತ್ರಿಕ ದೋಷದಿಂದ ಸಬ್ ಮಿಟ್ ಆಗಲಿಲ್ಲ. ಮತ್ತೆ ಕೆಲವರು ಪರೀಕ್ಷಾ ಕೇಂದ್ರದಿಂದ ಹೊರ ಬಂದು ಯುಜಿಸಿ ವಿರುದ್ಧ ಪ್ರತಿಭಟನೆ ಮಾಡಿದರು. 3 ಗಂಟೆ ಕಾದು ಕುಳಿತರೂ ಪ್ರಶ್ನೆ ಪತ್ರಿಕೆ ಪೂರೈಕೆ ಮಾಡಲಾಗಿಲ್ಲ ಎಂದು ಪರೀಕ್ಷಾರ್ಥಿಗಳು ಆರೋಪಿಸಿದ್ದಾರೆ.
ಮರು ಪರೀಕ್ಷೆ ಒತ್ತಾಯಕ್ಕೆ ಮಣಿದ ಯುಜಿಸಿ:
ಯುಜಿಸಿ ಮಾಡಿರುವ ಎಡವಟ್ಟಿಗೆ ಪರೀಕ್ಷಾರ್ಥಿಗಳು ಮರು ಪರೀಕ್ಷೆ ಮಾಡುವಂತೆ ಒತ್ತಾಯಿಸಿದರು. ಈ ಬಗ್ಗೆ ನಮಗೆ ಲಿಖಿತ ದಾಖಲೆಗಳ ಮೂಲಕ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು. ತಮ್ಮ ತಪ್ಪನ್ನು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಮರು ಪರೀಕ್ಷೆ ಮಾಡುವುದಾಗಿ ಯುಜಿಸಿ ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ನಂತರ ಪರೀಕ್ಷಾರ್ಥಿಗಳು ಮನೆಗಳತ್ತ ತೆರಳಿದರು.
ನಂತರ ಮಾತನಾಡಿದ ಪರೀಕ್ಷಾರ್ಥಿ ಅರ್ಚನ, ಇದು ಕನ್ನಡಕ್ಕೆ ಮಾಡಿರುವ ಅವಮಾನ. ನಾವು ಇಂದು ಕನ್ನಡ ಸಾಹಿತ್ಯ ಪರೀಕ್ಷೆ ಬರೆಯಲು ಬಂದಿದ್ದು, ಅದರಲ್ಲಿ ಕನ್ನಡದ 10 ಪ್ರಶ್ನೆಗಳಿದ್ದು ಉಳಿದ ಎಲ್ಲಾ ಪ್ರಶ್ನೆಗಳು ಹಿಂದಿ ಭಾಷೆಯಲ್ಲಿ ಪ್ರಕಟವಾಗಿದ್ದವು. ಕರ್ನಾಟಕದಲ್ಲಿ ಯಾವುದೇ ಪರೀಕ್ಷೆ ನಡೆದರೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಡೆಯಬೇಕು ಎಂದು ಒತ್ತಾಯಿಸಿದರು.
ಕಳೆದ ಎರಡು ವರ್ಷ ಕೋವಿಡ್ ಕಾರಣ ಪರೀಕ್ಷೆಯನ್ನು ಮುಂದೂಡಲಾಯಿತು. ಪರೀಕ್ಷೆಗೆ ರಾಜ್ಯದ ನಾನಾ ಕಡೆಗಳಿಂದ ಗೃಹಿಣಿಯರು, ಬಾಣಂತಿಯರು, ಯುವತಿಯರು ಬಂದಿದ್ದು ಇಲ್ಲಿ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಲ್ಲ. ಕುಡಿಯಲು ನೀರೂ ಸಹ ಇಟ್ಟಿಲ್ಲ. ನಮ್ಮ ಸಮಸ್ಯೆಗೆ ಯಾವೊಬ್ಬ ಅಧಿಕಾರಿ ಸ್ಪಂದಿಸುತ್ತಿಲ್ಲ. ಯುಜಿಸಿಯವರು ಸಮರ್ಪಕವಾಗಿ ಪರೀಕ್ಷೆ ನಡೆಸಿಲ್ಲ ಎಂದು ದೂರಿದರು.
ಇದನ್ನೂ ಓದಿ: Karnataka COVID: ರಾಜ್ಯದಲ್ಲಿಂದು 348 ಮಂದಿಗೆ ಕೋವಿಡ್ ದೃಢ: ಮೂವರು ಸೋಂಕಿತರ ಸಾವು
ನಂತರ ಕೋಲಾರದಿಂದ ಬಂದಿದ್ದ ಚಲಪತಿ ಮಾತನಾಡಿ, ಯುಜಿಸಿ ನಡೆಸುತ್ತಿರುವ ಎಲ್ಲಾ ವಿಷಯಗಳ ಪರೀಕ್ಷೆ ಮುಗಿದಿದ್ದು, ಕೊನೆಯ ಪರೀಕ್ಷೆ ಕನ್ನಡ ಆಗಿದೆ. ಕನ್ನಡ ಪರೀಕ್ಷೆಯನ್ನು ಕೊನೆಯಲ್ಲಿ ನಡೆಸುವ ಮೂಲಕ ಅಪಮಾನ ಮಾಡಿದೆ. ಇಲ್ಲಿ ಬಂದಿರುವ ಎಲ್ಲರೂ ಕನ್ನಡಲ್ಲಿ ಡಬಲ್ ಡಿಗ್ರಿ ಮಾಡಿ ಪಿಹೆಚ್ಡಿ ಮಾಡಿದರೂ ಶಾಲಾ ಕಾಲೇಜುಗಳಲ್ಲಿ ನಮಗೆ ಕೆಲಸ ಕೊಡಲು ಆಲೋಚನೆ ಮಾಡುತ್ತಾರೆ. ಕರ್ನಾಟಕದಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.