ಬೆಂಗಳೂರು: ರಾಜ್ಯಾದ್ಯಂತ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಹಬ್ಬ ಹರಿದಿನಗಳಿಗೆ ಮಂಕು ಕವಿದಿತ್ತು. ಇದೀಗ ಸೋಂಕು ಇಳಿಕೆಯಾಗಿದ್ದು ನಿರ್ಬಂಧಗಳನ್ನ ತೆರವು ಮಾಡಲಾಗಿದೆ. ಈ ಹಿನ್ನೆಲೆ ಇಂದು ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಸಿಲಿಕಾನ್ ಸಿಟಿ ಮಂದಿ ಹಬ್ಬದ ಹಿನ್ನೆಲೆ ಬೆಳ್ಳಂಬೆಳಗ್ಗೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
'ಯುಗಾದಿ' ಹೆಸರೇ ಹೇಳುವಂತೆ ಹೊಸ ಯುಗದ ಆದಿ, ಮತ್ತೊಂದು ಸಂವತ್ಸರದ ಆರಂಭ. ಅಲ್ಲದೇ ಪ್ರಕೃತಿಯು ಹಳೆ ತೊಗಲನ್ನು ಕಳೆದುಕೊಂಡು ಹೊಸತನ್ನು ಹೊದ್ದುಕೊಳ್ಳುವ ಸಂದರ್ಭ. ಹೀಗಾಗಿ ಈ ಯುಗಾದಿ ಹಬ್ಬಕ್ಕೆ ನಾಡಿನಾದ್ಯಂತ ತನ್ನದೇ ಆದ ವಿಶೇಷ ಸ್ಥಾನಮಾನವಿದೆ.
ರಾಜ್ಯದ ಒಂದೊಂದು ಭಾಗಗಳಲ್ಲಿ ಒಂದೊಂದು ತೆರನಾಗಿ ಈ ಹಬ್ಬವನ್ನು ಆಚರಿಲಾಗುತ್ತದೆ. ಯುಗಾದಿಯನ್ನ ಹೊಸ ವರ್ಷವನ್ನಾಗಿ ಹಿಂದೂಗಳು ಆಚರಣೆ ಮಾಡುತ್ತಾರೆ. ಯುಗಾದಿ ಎಂದಾಕ್ಷಣ ನೆನಪಾಗುವುದು ಬುಲ್ಟೆಂಪಲ್ನಲ್ಲಿರುವ ದೊಡ್ಡ ಗಣಪತಿ ದೇವಸ್ಥಾನ. ಇಲ್ಲಿ ಹಬ್ಬದ ಹಿನ್ನೆಲೆ ವಿಶೇಷ ಅಭಿಷೇಕ, ಪೂಜೆ ಪುನಸ್ಕಾರ ನೆರವೇರಿಸಲಾಗುತ್ತಿದೆ.
ಇದನ್ನೂ ಓದಿ: ಯುಗಾದಿ: ಬೆಲೆ ಏರಿಕೆ ಬಿಸಿ ನಡುವೆಯೇ ಖರೀದಿಗಾಗಿ ಮಾರುಕಟ್ಟೆಯಲ್ಲಿ ಕಿಕ್ಕಿರಿದು ತುಂಬಿದ ಜನ
ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ್ ನಂದು ಆಚರಿಸುವ ಯುಗಾದಿ ಹಿಂದೂಗಳ ಹೊಸ ವರ್ಷವೆಂದು ಆಚರಿಸಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ 'ಚಂದ್ರಮಾನ ಯುಗಾದಿ' ಎಂದು ಆಚರಿಸಲಾಗುತ್ತದೆ. ನಗರದ ಇತರೆ ಇತಿಹಾಸ ಪ್ರಸಿದ್ಧ ಕಾಡು ಮಲ್ಲೇಶ್ವರ, ಗವಿ ಗಂಗಾಧೇಶ್ವರ ಸೇರಿದಂತೆ ನಾನಾ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.
ಯುಗಾದಿ ಸಂಭ್ರಮ ಹಿನ್ನೆಲೆ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕರ್ಯಗಳನ್ನ ನೆರವೇರಿಸಲಾಗುತ್ತಿದೆ. ಬಂದ ಭಕ್ತರಿಗೆ ವಿಶೇಷ ಪ್ರಸಾದ, ಬೇವು-ಬೆಲ್ಲ ನೀಡಲು ಸಿದ್ಧತೆ ಮಾಡಿಕೊಳ್ಳುವಂತೆ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಹೀಗಾಗಿ ಬೆಳಗ್ಗೆ 6 ಗಂಟೆಯಿಂದಲೇ ದೇವಸ್ಥಾನಗಳಲ್ಲಿ ಪೂಜೆ ಆರಂಭವಾಗಿದ್ದು, ಪಂಚಾಭಿಷೇಕ, ರುದ್ರಾಭಿಷೇಕ ಮಾಡಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಕೊರೊನಾ ಬಂದ ವರ್ಷದಿಂದ ಸರಳವಾಗಿ ಹಬ್ಬವನ್ನ ಆಚರಿಸಲಾಗುತ್ತಿತ್ತು. ಕೇವಲ ಪೂಜೆ, ಅರ್ಚನೆಗಷ್ಟೇ ಸೀಮಿತವಾಗಿತ್ತು. ಆದರೆ ಈ ಬಾರಿ ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಂಜೆ ದೇವಸ್ಥಾನದ ಆವರಣದಲ್ಲಿ ವಿಶೇಷ ನಾಟಕ, ಭರತ ನಾಟ್ಯ ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ನಾಡಿನ ಜನತೆಗೆ ಯುಗಾದಿ ಶುಭಾಶಯ ಕೋರಿದ ರಾಹುಲ್ ಗಾಂಧಿ