ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ಗೆ ಮಾ. 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಜಗದೀಶ್ ಆದೇಶ ಹೊರಡಿಸಿದ್ದಾರೆ.
ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಅವಧಿ ಅಂತ್ಯ ಹಿನ್ನೆಲೆಯಲ್ಲಿ ಕೋರಮಂಗಲದ ಎನ್ಜಿವಿ ಬಡಾವಣೆಯಲ್ಲಿರುವ ಐದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಅಮೂಲ್ಯಳನ್ನು ಉಪ್ಪಾರಪೇಟೆ ಪೊಲೀಸರು ಹಾಜರುಪಡಿಸಿದರು. ಪೊಲೀಸ್ ವಿಚಾರಣೆ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮಾ. 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ಆದೇಶದ ಬೆನ್ನಲ್ಲೇ ಅಮೂಲ್ಯಳನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ.
ನಾಲ್ಕು ದಿನಗಳಿಂದ ಎಸ್ಐಟಿ ಅಮೂಲ್ಯಳನ್ನು ಆಕೆ ವಾಸ ಮಾಡುತ್ತಿದ್ದ ಪಿಜಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಗಳು ಸಹ ಪ್ರಕರಣದ ಮಾಹಿತಿಯನ್ನು ಎಸ್ಐಟಿಯಿಂದ ಪಡೆದುಕೊಂಡಿದ್ದವು.