ಬೆಂಗಳೂರು: ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನ. ಆ ಭಾಗದ ಜನ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದಾರೆ. ಸರ್ದಾರ್ ವಲ್ಲಭಾಯ್ ಪಟೇಲ್ ಅವರ ದಿಟ್ಟತನದ ನೇತೃತ್ವದ ಪರಿಣಾಮವಾಗಿ ನಿಜಾಮರ ದಾಸ್ಯದಿಂದ ಹೈದರಾಬಾದ್ ಕರ್ನಾಟಕ ಭಾಗ ಮುಕ್ತವಾಗಲು ಸಾಧ್ಯವಾಯಿತು.
ಈ ಸಮಯದಲ್ಲಿ ವಲ್ಲಭಾಯಿ ಪಟೇಲ್ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನಕ್ಕೆ ತಿಳಿಸಿದರು.
ವಿಮೋಚನಾ ದಿನವಾಗಿ ಆಚರಿಸಲಾಗುತ್ತಿದ್ದು, ನಾಡಿನ ಜನರ ಪರವಾಗಿ ಅಭಿನಂದನೆ ಸಲ್ಲಿಸೋಣ. ಹಿಂದಿನ ಸಿಎಂ ಬಿಎಸ್ ಯಡಿಯೂರಪ್ಪ 2019ರ ಸೆಪ್ಟೆಂಬರ್ 6 ರಂದು ಆ ಭಾಗದ ಜನರ ಅಪೇಕ್ಷೆ ಮೇರೆಗೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದಾರೆ. ಇದು ಬಹಳ ಸಂತೋಷದ ವಿಷಯ. ಆ ಭಾಗದ ಜನತೆಯ ಸಂತೋಷದಲ್ಲಿ ಭಾಗಿಯಾಗೋಣ. ಕಲ್ಯಾಣ ಕರ್ನಾಟಕದ ವಿಮೋಚನಾ ದಿನದ ಶುಭಾಶಯ ತಿಳಿಸೋಣ ಎಂದರು.
ಪ್ರಧಾನಿ ಮೋದಿ ಜನ್ಮ ದಿನಕ್ಕೆ ಶುಭಾಶಯ
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವೂ ಹೌದು. ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಶುಭಾಶಯ ಸಲ್ಲಿಸೋಣ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನಕ್ಕೆ ತಿಳಿಸಿದರು.