ಬೆಂಗಳೂರು: ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರಿ ಮಳೆಯಾಗಲಿದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಪ್ರಾದೇಶಿಕ ವಿಭಾಗ ನಿರ್ದೇಶಕರಾದ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ರಾಜ್ಯದ ಉತ್ತರ ಒಳನಾಡಿನಲ್ಲಿ ಬಹುತೇಕ ಮಳೆಯಾಗಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ 7 ಸೆಂ.ಮೀ, ಚಿಂತಾಮಣಿ 4 ಸೆಂ.ಮೀ, ಶಿರಾಹಟ್ಟಿಯಲ್ಲಿ 3 ಸೆಂ.ಮೀ ಮಳೆಯಾಗಿದೆ.
ಬಂಗಾಳ ಉಪಸಾಗರದ ಮಧ್ಯಭಾಗದಲ್ಲಿ ವಾಯುಭಾರ ಕುಸಿತವಾಗಿದೆ. ಇದರ ಪರಿಣಾಮವಾಗಿ ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 20 ರಿಂದ 23 ರವರೆಗೆ ಎಲ್ಲಾ ಸ್ಥಳಗಳಲ್ಲಿ ಮಳೆಯಾಗಲಿದ್ದು, ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅ.24 ರಂದು ಕೆಲವು ಕಡೆ ಮಾತ್ರ ಮಳೆಯಾಗಲಿದೆ ಎಂದರು.
ಉತ್ತರ ಒಳನಾಡಿನಲ್ಲಿ ಅ.20 ರಿಂದ 22ರವರೆಗೆ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗಲಿದ್ದು, ಅ. 23, 24ರಂದು ಕೆಲವು ಕಡೆ ಮಾತ್ರ ಮಳೆಯಾಗಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅ. 20 ಹಾಗೂ 21ರಂದು ಬಹುತೇಕ ಎಲ್ಲಾ ಕಡೆಗಳಲ್ಲಿ ಮಳೆಯಾಗಲಿದ್ದು, ಅಕ್ಟೋಬರ್ 22 ರಿಂದ 24 ರವರೆಗೆ ಕೆಲವು ಕಡೆ ಮಾತ್ರ ಮಳೆಯಾಗಲಿದೆ. ಶಿವಮೊಗ್ಗ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ರಾಯಚೂರು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದರು.