ದೊಡ್ಡಬಳ್ಳಾಪುರ: ಪ್ರತಿನಿತ್ಯ ಜನರನ್ನು ಯಾಮಾರಿಸಿ ದೋಚುವ, ದರೋಡೆ ಮಾಡುವ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ದೊಡ್ಡಬಳ್ಳಾಪುರದಲ್ಲಿ ಕಳ್ಳರ ಕಣ್ಣು ಇದೀಗ ಸೈಕಲ್ಗಳ ಮೇಲೆ ಬಿದ್ದಿದೆ.
ಹೆತ್ತವರ ಬಳಿ ಕಾಡಿ ಬೇಡಿ ಹಣವನ್ನು ಹೊಂದಿಸಿ ಮಕ್ಕಳು ಸೈಕಲ್ ಖರೀದಿಸಿರುತ್ತಾರೆ. ಆದರೆ ಕಷ್ಟಪಟ್ಟು ಖರೀದಿಸಿದ ಚಿಣ್ಣರ ಸೈಕಲ್ಗಳ ಮೇಲೆ ಇದೀಗ ಕಳ್ಳರ ಕೆಟ್ಟ ದೃಷ್ಟಿ ಬಿದ್ದಿದೆ.
ದೊಡ್ಡಬಳ್ಳಾಪುರ ನಗರದ ಪ್ರಿಯದರ್ಶಿನಿ ಬಡಾವಣೆಯ ಮೂರನೇ ಕ್ರಾಸ್ನಲ್ಲಿರುವ ನವೀನ್ ಶನಿವಾರ ಕುಟುಂಬ ಸಮೇತರಾಗಿ ಹೊರಗೆ ಹೋಗಿದ್ದರು. ಸಂಜೆ ಸುಮಾರು 4 ಗಂಟೆ ಸಮಯಕ್ಕೆ ಮನೆಗೆ ಬಂದ ಕಳ್ಳರ ಗ್ಯಾಂಗ್, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮಸಿ, ಕಾಂಪೌಂಡ್ ಒಳಗೆ ನಿಲ್ಲಿಸಿದ ಸೈಕಲ್ ಅನ್ನು ಕದ್ದೊಯ್ದಿದ್ದಾರೆ.
ನವೀನ್ ಕುಟುಂಬಸ್ಥರು ಮನೆಗೆ ವಾಪಸ್ ಬಂದ ನಂತರ ಸೈಕಲ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದ್ದು, ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.