ಬೆಂಗಳೂರು: ಕೆಟ್ಟ ಮೇಲೂ ಬುದ್ಧಿ ಬಂದಿಲ್ಲ ಎಂಬಂತೆ ಇಲ್ಲೊಬ್ಬ ಆರೋಪಿ ಅಪರಾಧ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದರೂ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದಾನೆ.
ಜೈಲಿನಿಂದ ಹೊರಬಂದ ಮೇಲೂ ಕಳ್ಳತನ ಮುಂದುವರೆಸಿದ್ದ ಚಾಲಾಕಿ ಕಳ್ಳನೊಬ್ಬ ಕಳ್ಳತನ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿ ಈಗ ಮತ್ತೆ ಜೈಲು ಸೇರಿದ್ದಾನೆ. ಪ್ರತಾಪ್ ಅಲಿಯಾಸ್ ಗೊಣ್ಣೆ ಬಂಧಿತ ಆರೋಪಿ.
ವಿಲಾಸಿ ಜೀವನಕ್ಕಾಗಿ ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಆರೋಪಿಯು 2011ರಲ್ಲಿ ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಂಗಡಿಯೊಂದರಲ್ಲಿ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ. ನ್ಯಾಯಾಲಯದಲ್ಲಿ ಈತನ ತಪ್ಪು ಸಾಬೀತಾಗಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿ, 2018ರಲ್ಲಿ ಬಿಡುಗಡೆಯಾಗಿದ್ದ. ಸೆರೆಮನೆಯಿಂದ ಬಿಡುಗಡೆಯಾಗುತ್ತಿದ್ದಂತೆ ಮದುವೆ ಮಾಡಿಕೊಂಡಿದ್ದಾನೆ. ಮನೆ ಸಂಸಾರ ನಿಭಾಯಿಸಲು ಹಣದ ಅಗತ್ಯ ಇದ್ದಿದ್ದರಿಂದ ಅಕ್ರಮವಾಗಿ ಹಣ ಸಂಪಾದಿಸಲು ಮತ್ತೆ ಅಡ್ಡದಾರಿ ಹಿಡಿದ ಪ್ರತಾಪ್, ಇತ್ತೀಚೆಗೆ ತ್ಯಾಗರಾಜನಗರ ಮೆಡಿಕಲ್ ಶಾಪ್ವೊಂದರಲ್ಲಿ ಕಳ್ಳತನ ನಡೆಸಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚೆನ್ನಮ್ಮಕೆರೆ ಅಚ್ಚುಕಟ್ಟು ಪೊಲೀಸರು ಕಳ್ಳನನ್ನು ಸೆರೆ ಹಿಡಿದಿದ್ದಾರೆ. ಬಂಧಿತನ ವಿರುದ್ಧ ಸಿ.ಕೆ. ಅಚ್ಚುಕಟ್ಟು ಠಾಣೆಯಲ್ಲಿ ಆರು, ಪುಟ್ಟೇನಹಳ್ಳಿ ಠಾಣೆಯಲ್ಲಿ ಎರಡು ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ. ಸದ್ಯ ಬಂಧಿತನಿಂದವ 14.15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡು ತನಿಖೆ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.