ಬೆಂಗಳೂರು: ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಹಸಿವಾದರೂ ಊಟ ಕೊಡುತ್ತಿಲ್ಲ. ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದೇವೆ ಎಂದು ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ವಿಡಿಯೋ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಕಾನ್ಸ್ಟೇಬಲ್ ಅಲ್ಲಿನ ಇತರ ರೋಗಿಗಳು ತೋಡಿಕೊಂಡ ನೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸೋಂಕಿತರಿಗೆ ಸರಿಯಾದ ಊಟದ ವ್ಯವಸ್ಥೆ, ಸ್ವಚ್ಛತೆ ಇಲ್ಲ. ವೈದ್ಯರಂತೂ ಬರುವುದೇ ಇಲ್ಲ ಎಂದು ದೂರಿದ್ದಾರೆ.
ಎಲ್ಲರಿಗೂ ಒಂದೇ ಸ್ನಾನದ ಕೊಠಡಿ, ಅದರಲ್ಲಿ ಒಂದೇ ಜಗ್ಗು. ಇದು ಆಸ್ಪತ್ರೆಯ ಅವ್ಯವಸ್ಥೆ. ಕೊರೊನಾ ರೋಗಿಗಳು ಅಂದರೆ ಸರ್ಕಾರಕ್ಕೆ ಅಷ್ಟು ಬೇಜವಾಬ್ದಾರಿ ಏಕೆ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.