ಬೆಂಗಳೂರು : ಮಹಿಳೆಗೆ ಮತ್ತು ಬರುವ ಔಷಧಿ ಬೆರೆಸಿದ ಕೂಲ್ ಡ್ರಿಂಕ್ಸ್ ಕೊಟ್ಟು ಪ್ರಜ್ಞೆ ತಪ್ಪಿದ ಬಳಿಕ ಆಕೆಯ ಮನೆಯಲ್ಲಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದ ನಿವಾಸಿ ಗೀತಾ(36) ಹಾಗೂ ಭಾರತಿಬಾಯಿ(30) ಬಂಧಿತರು.
ಕತ್ರಿಗುಪ್ಪೆ ನಿವಾಸಿಯಾದ ಸೌಭಾಗ್ಯ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಸೌಭಾಗ್ಯರಿಗೆ ಹಳೆಯ ಪರಿಚಿತರಾದ ಗೀತಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೌಭಾಗ್ಯ ನಗರದ ವಿವಿಧೆಡೆ ಮನೆಗೆಲಸ ಮಾಡುತ್ತಿದ್ದು, ಈ ಹಿಂದೆ ಆರೋಪಿ ಗೀತಾ ಕೂಡ ಸೌಭಾಗ್ಯರ ಜೊತೆಗೆ ಮನೆ ಕೆಲಸ ಮಾಡುತ್ತಿದ್ದಳು. ಈ ನಡುವೆ ಕೆಲಸ ಬಿಟ್ಟಿದ್ದ ಗೀತಾಗೆ ಮತ್ತೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ.
ಮನೆಗೆ ಕರೆಸಿಕೊಂಡು ಕೃತ್ಯ : ಕೆಲಸವಿದ್ದರೆ ತಿಳಿಸುವಂತೆ ಸೌಭಾಗ್ಯ ಬಳಿ ಆಗಾಗ ಹೇಳುತ್ತಿದ್ದಳು. ಏಪ್ರಿಲ್ 27ರಂದು ಮಧ್ಯಾಹ್ನ ಸೌಭಾಗ್ಯಗೆ ಕರೆ ಮಾಡಿದ ಗೀತಾ, ನಿಮ್ಮ ಮನೆಯ ಬಳಿಯೇ ಬಂದಿರುವುದಾಗಿ ಹೇಳಿ ಮನೆಗೆಲಸಕ್ಕೆ ಹೋಗಿದ್ದ ಸೌಭಾಗ್ಯಳನ್ನು ಮನೆಗೆ ಕರೆಸಿಕೊಂಡಿದ್ದಳು. ಆಕೆ ಮನೆಗೆ ಬರುತ್ತಿದ್ದಂತೆ ಮತ್ತು ಬರುವ ಔಷಧಿ ಬೆರೆಸಿದ್ದ ಕೂಲ್ ಡ್ರಿಂಕ್ಸ್ ಅನ್ನು ಕೊಟ್ಟಿದ್ದಳು. ಇದನ್ನು ಸೇವಿಸಿದ ಕೆಲ ಹೊತ್ತಿನಲ್ಲೇ ಸೌಭಾಗ್ಯ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಈ ವೇಳೆ ಆಕೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯದ ಸರ, ಮನೆಯಲ್ಲಿದ್ದ 4 ಲಕ್ಷ ರೂ. ಮೌಲ್ಯದ 82 ಗ್ರಾಂ ಚಿನ್ನಾಭರಣವನ್ನು ತೆಗೆದುಕೊಂಡು ಗೀತಾ ಪರಾರಿಯಾಗಿದ್ದಾಳೆ. ಇತ್ತ ಸೌಭಾಗ್ಯ ಪತಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಮಲಗಿದ್ದ ಪತ್ನಿಯನ್ನು ಎಚ್ಚರಿಸಿದಾಗ ಕಳ್ಳತನ ನಡೆದಿರುವ ಕೃತ್ಯ ಬೆಳಕಿಗೆ ಬಂದಿದೆ.
ಸೌಭಾಗ್ಯ ಗಿರಿನಗರ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದರು. ತಲೆಮರೆಸಿಕೊಂಡಿರುವ ಗೀತಾಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರಣೆಯ ವೇಳೆ ಭಾರತಿಬಾಯಿ ಎಂಬುವರು ಮತ್ತು ಬರುವ ಔಷಧವನ್ನು ಪೂರೈಸಿದ್ದಾಗಿ ಗೀತಾ ಬಾಯ್ಬಿಟ್ಟಿದ್ದದ್ದಾಳೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಓದಿ : ಮೇಕೆ ಮೇಯಿಸುತ್ತಿದ್ದ ವೃದ್ಧೆಯ ಸರಗಳ್ಳತನ : 'ಇಂಜಿನಿಯರಿಂಗ್' ಪ್ರೇಮಿಗಳ ಬಂಧನ