ಬೆಂಗಳೂರು: ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದರೆಂದು ಆರೋಪಿಸಿ, ಮಿಂಟೋ ಆಸ್ಪತ್ರೆ ವೈದ್ಯರು ಸೇವೆಗೆ ಹಾಜರಾಗದೇ ಪ್ರತಿಭಟನೆ ನಡೆಸುತ್ತಿದ್ದು, ಬೆಂಗಳೂರು ಮೆಡಿಕಲ್ ಕಾಲೇಜು ಡೀನ್ ಜೊತೆ ನಡೆದ ಸಂಧಾನ ಸಭೆ ವಿಫಲವಾಗಿದೆ.
ಪ್ರತಿಭಟನೆ ಮುಂದುವರೆಸಲು ಕಿರಿಯ ವೈದ್ಯರು ನಿರ್ಧಾರ ಮಾಡಿದ್ದು, ನಾಳೆಯೂ ಮಿಂಟೋ, ವಿಕ್ಟೋರಿಯಾ, ಬೌರಿಂಗ್, ವಾಣಿವಿಲಾಸ್ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ವ್ಯತ್ಯಯವಾಗಲಿದೆ.. ಇನ್ನು ಈಗಾಗಲೇ ಮಿಂಟೋ ಆಸ್ಪತ್ರೆ ಕಿರಿಯ ವೈದ್ಯರ ಪ್ರತಿಭಟನೆ ವಿಚಾರವನ್ನ ಮೆಡಿಕಲ್ ಪ್ರಿನ್ಸಿಪಾಲ್ ಸೆಕ್ರೆಟರಿ ಜಾವೇದ್ ಅಕ್ತರ್ ಅವರ ಬಳಿ ಚರ್ಚಿಸಲಾಗಿದೆ ಅಂತ ಬೆಂಗಳೂರು ಮೆಡಿಕಲ್ ಕಾಲೇಜಿನ ಡೀನ್ ಸತೀಶ್ ತಿಳಿಸಿದರು.
ಕಿರಿಯ ವೈದ್ಯರಿಗೆ ಪ್ರತಿಭಟನೆ ಮಾಡದಂತೆ ಮನವಿ ಮಾಡಲಾಗಿದೆ ಆದರೆ ಅವರು ಮುಂದುವರೆಸುವುದಾಗಿ ತಿಳಿಸಿದ್ದಾರೆ. ಆದರೆ ಇವರ ಪ್ರತಿಭಟನೆಯಿಂದ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.