ಬೆಂಗಳೂರು: ಎರಡು ದಿನಗಳ ಕಾಲ ದೆಹಲಿಗೆ ಹೋಗುತ್ತಿದ್ದಂತೆ ಮಾಧ್ಯಮಗಳೇ ನನ್ನನ್ನು ಮುಖ್ಯಮಂತ್ರಿ ಮಾಡಿ ಬಿಟ್ಟಿವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದರು.
ಇಂದು ಸಿಎಂರನ್ನು ಭೇಟಿಯಾದ ಬಳಿಕ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಎರಡು ದಿನದ ಭೇಟಿಯಲ್ಲೇ ನನ್ನನ್ನು ಸಿಎಂ ಎಂಬ ರೀತಿಯಲ್ಲಿ ಬಿಂಬಿಸಿದ್ದಾರೆ. ಇನ್ನೊಂದು ಬಾರಿ ದೆಹಲಿಗೆ ಹೋದರೆ ನಿನ್ನನ್ನು ಪ್ರಧಾನಿ ಮಾಡುತ್ತಾರೆ ಎಂದು ಸಿಎಂ ಅವರೇ ಹೇಳಿದ್ದಾರೆ. ನಾವೆಲ್ಲರೂ ಸಿಎಂ ಅಧೀನದಲ್ಲಿ ಇರುವವರು ಎಂದು ಸ್ಪಷ್ಟಪಡಿಸಿದರು.
ದೆಹಲಿಗೆ ಹೋದರೆ ವಿಶೇಷ ಅರ್ಥ ಕಲ್ಪಿಸುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ನಿನ್ನೆ ನೀವೇ ಕೇಳಿದ್ದಕ್ಕೆ ಸಿಎಂ ಭೇಟಿ ಆಗುತ್ತೇನೆ ಎಂದು ಹೇಳಿದ್ದೆ. ದೆಹಲಿಗೆ ಹೋಗಿದ್ದು, ಎರಡೂ ಇಲಾಖೆಯ ಕೆಲಸ ಸರಿ ಅಯ್ತಾ ಎಂದು ಸಿಎಂ ಕೇಳಿದ್ದರು. ಎರಡೂ ಇಲಾಖೆಗಳದ್ದು ಸರಿ ಆಯ್ತು ಎಂದು ಹೇಳಿದೆ. ರಾಜಕೀಯ ಸುದ್ದಿ ಅವರಿಗೆ ಗೊತ್ತಿದೆ ಎಂದರು.
ಇದೇನೂ ಸಿಎಂಗೆ ಹೊಸದಾ?. ಅವರಿಗೆ ವಯಸ್ಸು 78. ಇಂತಹ ವಿಚಾರಗಳನ್ನು ಎಷ್ಟು ನೋಡಿಲ್ಲ ಅವರು. ಅವರ ಅನುಭವದ ಮುಂದೆ ಇದೆಲ್ಲವೂ ಬಹಳ ಕಡಿಮೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇಲ್ಲಿಯವರೆಗೆ ಎಲ್ಲೂ ಚರ್ಚೆ ಆಗಿಲ್ಲ. ಸಿಎಂ ವರಿಷ್ಠರ ಜೊತೆ ಪೋನ್ ಮೂಲಕ ಚರ್ಚೆ ಮಾಡಿಕೊಳ್ಳುತ್ತಿರುತ್ತಾರೆ. ಅದು ನಮಗೆ ಹೇಗೆ ಗೊತ್ತಾಗುತ್ತದೆ? ಎಂದು ಪ್ರಶ್ನಿಸಿದರು.
ಹಿರಿಯ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಸಂದರ್ಭ ಇನ್ನೂ ಬಂದಿಲ್ಲ. ಬಂದಾಗ ಸಿಎಂ ಎಲ್ಲರನ್ನೂ ಕರೆಸಿ ಯಾರ್ಯಾರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬುದರ ಕುರಿತು ಮಾತಾಡುತ್ತಾರೆ. ಈ ಅಮವಾಸ್ಯೆ ಹುಣ್ಣಿಮೆ ಮಧ್ಯೆ ಏನು ಇರುತ್ತದೆ ಎಂದು ಕೇಳಿದರೆ ನಾನೇನು ಹೇಳಲಿ? ಎಂದು ತಿಳಿಸಿದರು.
ದೆಹಲಿಯಲ್ಲಿ ಶಶಿಕಲಾ ಜೊಲ್ಲೆ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೊಲ್ಲೆ ಅವರ ಇಲಾಖೆ ಸಂಬಂಧ ಸ್ಮೃತಿ ಇರಾನಿ ಭೇಟಿಗೆ ಬಂದಿದ್ದರು. ಅವರಿಗೆ ಕರ್ನಾಟಕ ಭವನದಲ್ಲಿ ರೂಮ್ ಬುಕ್ ಆಗಿತ್ತು. ಆದರೆ ಅಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಕಾರಣ ಅವರು ಅಲ್ಲಿ ಉಳಿದುಕೊಂಡಿರಲಿಲ್ಲ. ನಾನು ಅಲ್ಲಿ ಬಂದಿದ್ದೇನೆ ಎಂಬ ಮಾಹಿತಿ ತಿಳಿದು ಸೌಹಾರ್ದ ಭೇಟಿ ಮಾಡಿದ್ದಾರೆ ಅಷ್ಟೇ. ಅವರನ್ನು ಸಂಪುಟದಿಂದ ಕೈ ಬಿಡ್ತಾರೆ ಇವರನ್ನು ತೆಗೆದುಕೊಳ್ಳುತ್ತಾರೆ ಎಂಬುದು ಎಲ್ಲವೂ ನಿಮ್ಮ ಕೃಪೆ ಎಂದು ತಿಳಿಸಿದರು.