ಬೆಂಗಳೂರು: ಕೊರೊನಾ ವೈರಸ್ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರದಿಂದಲೇ ಭರಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸೋಂಕಿತರೆಂದು ಸಂದೇಹ ಪಟ್ಟು ಕ್ವಾರಂಟೈನ್ಗೆ ಒಳಪಡಿಸುವವರಿಗೂ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸಬೇಕು. ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು. ಇಂದು ದುಬಾರಿ ಬೆಲೆಗೆ ಮಾಂಸ ಮಾರಾಟ ಮಾಡಿರುವುದು ವರದಿಯಾಗಿದೆ. ಇಂತಹ ಸಂದರ್ಭದಲ್ಲಿ ಜನರ ಆರೋಗ್ಯ ಮುಖ್ಯ. ಜನರು ಗುಂಪು ಗುಂಪಾಗಿ ಸೇರುವುದನ್ನ ತಪ್ಪಿಸಬೇಕು. ಲಾಕ್ಡೌನ್ ಮಾಡಿದ್ದರೂ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದ್ದಾರೆ.
ಇನ್ನು, ದಿನಸಿ, ಔಷಧಿಯಂತಹ ಅಗತ್ಯ ವಸ್ತುಗಳು ಸದಾ ಸಿಗುವಂತೆ ಮಾಡಬೇಕು. ಸಮಯ ನಿಗದಿ ಮಾಡಿದರೆ ಏಕಕಾಲಕ್ಕೆ ಹೆಚ್ಚು ಜನರು ಬಂದು ಗುಂಪು ಸೇರುವ ಸಾಧ್ಯತೆ ಇದೆ. ದಿನಕ್ಕೆ ಎರಡು ಬಾರಿ ರಾಜ್ಯಮಟ್ಟದ ಕಾರ್ಯಪಡೆ ಸಭೆ ಸೇರಿ ಸೂಕ್ತ ಮಾರ್ಗದರ್ಶನ ಮಾಡಬೇಕು. ಸೋಂಕು ಹರಡುವಿಕೆ ತಡೆಯಲು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.