ಬೆಂಗಳೂರು: ಕ್ಷೇತ್ರದ ಮತದಾರರು ಮತ್ತೊಮ್ಮೆ ನನ್ನನ್ನ ಗೆಲ್ಲಿಸಲಿದ್ದಾರೆ ಎಂದು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೇಡಹಳ್ಳಿಯ ಕೊದಂಡರಾಮಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೇರವೇರಿಸಿ, ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಮತದಾರರು ಮತ್ತೊಮ್ಮೆ ಕೈ ಹಿಡಿಯುವ ವಿಶ್ವಾಸವಿದೆ. ಮತಯಾಚನೆಗೆ ಜನ ಸೇರುತ್ತಿರುವುದು ನೋಡಿದರೆ ನನಗೆ ಗೆಲುವು ಖಚಿತವಾದಂತಿದೆ. ನಾನು ನಿತ್ಯ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿರುವೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಇದಕ್ಕಾಗಿ ಹಲವು ಬಾರಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಜನ ನನಗೆ ಮತ್ತೆ ವಿಧಾನಸೌಧಕ್ಕೆ ಕಳುಹಿಸಲಿದ್ದಾರೆ ಎಂಬ ನಂಬಿಕೆಯಿದೆ ಎಂದರು.
ಇನ್ನು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಮುಖ್ಯಮಂತ್ರಿಯಾಗಲಿ ಎಲ್ಲಾ ಕ್ಷೇತ್ರಗಳಿಗೆ ನೀಡುವ ಅನುದಾನದಂತೆ ನನ್ನ ಕ್ಷೇತ್ರಕ್ಕೂ ಅನುದಾನ ನೀಡಿದ್ದಾರೆ. ನಾನು ಕೊಂಚ ಏರುಧ್ವನಿಯಿಂದ ಅನುದಾನ ನೀಡುವಂತೆ ಒತ್ತಾಯಿಸಿದ್ದೆ. ಅದಕ್ಕೆ ಅವರು ಸ್ಪಂದಿಸಿದ್ದಾರೆ ಅಷ್ಟೇ ಎಂದರು.