ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಯಿದ್ದು, ಆ ಖ್ಯಾತಿಗೆ ತಕ್ಕಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ಆಧುನೀಕರಣಗೊಳ್ಳಬೇಕು ಎಂದು ಹೈಕೋರ್ಟ್ ಆಶಯ ವ್ಯಕ್ತಪಡಿಸಿದೆ. ನ್ಯಾಯಾಲಯದ ಕಲಾಪಗಳ ನೇರ ಪ್ರಸಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲೂ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಇರಬೇಕು. ಹೈಕೋರ್ಟ್‌ನಲ್ಲಿ ಇರುವಂತೆಯೇ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲೂ ಹೈಬ್ರಿಡ್ ವ್ಯವಸ್ಥೆ ಇರುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಕೋವಿಡ್ ನ್ಯಾಯಾಲಯಗಳ ಕಲಾಪಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ. ಹೈಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗುತ್ತಿದೆಯಾದರೂ, ಎಲ್ಲಾ ನ್ಯಾಯಾಲಯಗಳಲ್ಲೂ ಈ ವ್ಯವಸ್ಥೆ ಇಲ್ಲ. ಇದರಿಂದ, ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದೆ.
ಇನ್ನು ಸಂಭಾವ್ಯ ಕೋವಿಡ್ ಮೂರನೇ ಅಲೆಯ ಬಗ್ಗೆಯೂ ತಜ್ಞರು ಹೇಳುತ್ತಿದ್ದಾರೆ. ಆದ್ದರಿಂದ, ಹಂತ ಹಂತವಾಗಿ ರಾಜ್ಯದ ಎಲ್ಲಾ ಕೋರ್ಟ್‌ಗಳಿಗೂ ಹೈಬ್ರಿಡ್ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಜಾರಿಗೆ ತರಬೇಕಿದೆ. ಈ ಬಗ್ಗೆ ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.