ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಸಂಬಂಧ ಇತ್ತೀಚೆಗೆ ಎನ್ಐಎ ನ್ಯಾಯಾಲಯಕ್ಕೆ ಏಳು ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಸಿತ್ತು. ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದ್ದ 247 ಗಲಭೆಕೋರರ ಪೈಕಿ 40ಕ್ಕೂ ಹೆಚ್ಚು ಮಂದಿ ಎಸ್ಡಿಪಿಐ ಕಾರ್ಯಕರ್ತರ ಹೆಸರು ಉಲ್ಲೇಖವಾಗಿತ್ತು. ಈ ಬಗ್ಗೆ ಸೋಷಿಯಲ್ ಡ್ರೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಎಸ್ಡಿಪಿಐನ ಗುರಿಯಾಗಿಸಿಕೊಂಡು ಚಾರ್ಜ್ಶೀಟ್ನಲ್ಲಿ ಹೆಸರು ಉಲ್ಲೇಖಿಸಿದೆ. ಗಲಭೆಯ ಕೇಂದ್ರಬಿಂದು ಸಂಪತ್ ರಾಜ್ ಹಾಗೂ ಸ್ಥಳೀಯ ಕಾರ್ಪೋರೇಟರ್ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುವ ಹಂತದಲ್ಲಿ ಕೇಂದ್ರದ ಅಣತಿಯಂತೆ ಎನ್ಐಎ ನಮ್ಮ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ನಿರ್ದೇಶನದಂತೆ ಎನ್ಐಎ ದೆಹಲಿಯಿಂದಲೇ ಎಸ್ಡಿಪಿಐ ವಿರುದ್ಧ ಎಫ್ಐಆರ್ ದಾಖಲಿಸಿ ಬಂದಿತ್ತು. ಈ ಬಗ್ಗೆ ಕಳೆದ ಆರು ತಿಂಗಳಲ್ಲಿ 2000ಕ್ಕೂ ಹೆಚ್ಚು ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಲಾಗಿತ್ತು. ಈ ಪೈಕಿ ಕಾಂಗ್ರೆಸ್ ಮುಖಂಡ ಸಂಪತ್ ರಾಜ್, ಜೆಡಿಎಸ್ ಮತ್ತಿತರ ಪಕ್ಷಗಳ ಮುಖಂಡರೇ ನೇರ ಹೊಣೆಗಾರರಾಗಿದ್ದು, ಇದರಲ್ಲಿ ರಾಜಕೀಯ ಷಡ್ಯಂತ್ರವಿದೆ ಎಂದು ಸ್ಥಳೀಯ ಶಾಸಕ ಶ್ರೀನಿವಾಸಮೂರ್ತಿ ಹಾಗೂ ತನಿಖೆ ನಡೆಸಿದ ಸಿಸಿಬಿ ಹೇಳಿರುವುದು ವರದಿಯಾಗಿತ್ತು. ಆದರೂ ತಪ್ಪಿತಸ್ಥರು ಸುಲಭವಾಗಿ ಜಾಮೀನಿನಲ್ಲಿ ಬಿಡುಗಡೆಯಾಗಿರುವುದನ್ನು ಗಮನಿಸಿದರೆ ಅಮಾಯಕರನ್ನು ಸಿಲುಕಿಸಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರವಾಗಿದೆ ಎಂದು ಆಪಾದಿಸಿದರು.