ಬೆಂಗಳೂರು: ಸಮ್ಮಿಶ್ರ ಸರ್ಕಾರದ ರೀತಿಯಲ್ಲಿ ನಮ್ಮ ಸರ್ಕಾರದ ಸಂಪುಟ ಇರಬಾರದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಸಿಎಂ ದೆಹಲಿ ಭೇಟಿ ನಂತರ ಸಂಪುಟ ರಚನೆಯಾಗಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ರೀತಿ ನಾವು ಸರ್ಕಾರವನ್ನು ನಡೆಸಬಾರದು. ಉತ್ತಮವಾಗಿ ಸರ್ಕಾರ ನಡೆಸಬೇಕು. ಒಳ್ಳೆಯ ಸಚಿವ ಸಂಪುಟ ರಚಿಸಬೇಕು ಎನ್ನುವ ಕಾರಣಕ್ಕೆ ಸಂಪುಟ ರಚನೆ ವಿಳಂಬವಾಗುತ್ತಿದೆ. ಅಗಸ್ಟ್ 5 ಅಥವಾ 6 ರಂದು ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಲಿದ್ದು, ಅವರು ವಾಪಸ್ ಬಂದ ನಂತರ ಸಚಿವ ಸಂಪುಟ ರಚನೆ ಆಗಲಿದೆ ಎಂದರು.
ನಮ್ಮ ಪಕ್ಷದಲ್ಲಿ ಅನೇಕ ಹಿರಿಯರಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಹೀಗೆ ಎಲ್ಲರೂ ಕುಳಿತು ಚರ್ಚಿಸಿ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು. ಆಯ್ಕೆಗೆ ಮಾನದಂಡವೇನು? ಎಂದು ನಿರ್ಧಾರ ಕೈಗೊಳ್ಳಲಿದ್ದಾರೆ. ಇಲ್ಲಿ ಏಕಪಕ್ಷೀಯ ನಿರ್ಧಾರ ಇರುವುದಿಲ್ಲ ಎಂದು ರವಿಕುಮಾರ್ ಸ್ಪಷ್ಟಪಡಿಸಿದರು.
ಸ್ಪೀಕರ್ ಯಾರಾಗಬೇಕು ಎಂದು ನಾಲ್ವರ ಹೆಸರು ಚರ್ಚೆಯಲ್ಲಿತ್ತು. ಅದು ಮಾಧ್ಯಮಗಳಲ್ಲೂ ಬಹಿರಂಗವಾಗಿತ್ತು. ಮೊದಲ ಹೆಸರು ಬೋಪಯ್ಯ ಅವರದಿತ್ತು ನಂತರ ಕಾಗೇರಿ, ಮಾಧುಸ್ವಾಮಿ ಹೆಸರು ಕೂಡ ಇತ್ತು. ಇದರಲ್ಲಿ ಒಬ್ಬರನ್ನು ಮಾಡಲಾಗಿದೆ. ಕೊನೆ ಕ್ಷಣದಲ್ಲಿ ಹೆಸರು ಬದಲಾವಣೆ ಮಾಡಲಾಯಿತು ಎಂದು ಸ್ಪಷ್ಟೀಕರಣ ನೀಡಿದರು.