ಬೆಂಗಳೂರು: ಬಸವನಗುಡಿಯ ವಾಸವಿ ವಿದ್ಯಾನಿಕೇತನದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ತಮ್ಮ ಮಗಳ ಜೊತೆ ಆಗಮಿಸಿ 127ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಇಂದು ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಮತಗಟ್ಟೆಗೆ ಆಗಮಿಸಿದ ತೇಜಸ್ವಿನಿ ಹಾಗೂ ಅವರ ಪುತ್ರಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪತಿ ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆರು ಬಾರಿ ಸ್ಪರ್ಧಿಸಿ ಜಯ ಗಳಿಸಿದ್ದರು. ಅನಂತಕುಮಾರ್ ಮತದಾನ ಮಾಡಲು ಬರುತ್ತಿದ್ದಾಗ ನಾನು ಮತ್ತು ನಮ್ಮ ಕುಟುಂಬದವರು ಅವರ ಜೊತೆ ಬಂದು ಮತ ಚಲಾಯಿಸಿದ ನೆನಪು ಈಗ ಬರುತ್ತಿದೆ. ದೇಶಕ್ಕಾಗಿ ಮತ್ತು ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಮತ ಚಲಾಯಿಸಬೇಕು. ದೇಶದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯರಿಗೆ ಮತ ಹಾಕಬೇಕು ಎಂದು ಯಾರನ್ನೂ ಉಲ್ಲೇಖಿಸದೆ ಅವರು ಹೇಳಿದರು.
ಮತದಾನ ಎಲ್ಲರ ಹಕ್ಕು. ಹಾಗಾಗಿ ಯುವಕ, ಯುವತಿಯರು ಮತಗಟ್ಟೆಗೆ ಬಂದು ಮತ ಚಲಾಯಿಸಿ ಮತ್ತು ಉತ್ತಮ ದೇಶಕ್ಕಾಗಿ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.