ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾದ ಹಿನ್ನೆಲೆ ಇಂದಿನಿಂದ 1 ರಿಂದ 5ನೇ ಭೌತಿಕ ತರಗತಿಗಳು ಪ್ರಾರಂಭವಾಗಿದ್ದು, ಶಾಲಾ ಆವರಣವನ್ನು ಬಣ್ಣ ಬಣ್ಣದ ಬಲೂನ್ಗಳಿಂದ ಅಲಂಕರಿಸಿ, ಚಪ್ಪಾಳೆ ತಟ್ಟುವ ಮೂಲಕ ಮಕ್ಕಳನ್ನ ಶಿಕ್ಷಕರು ಬರಮಾಡಿಕೊಂಡರು.
ನಗರದ ಮಲ್ಲೇಶ್ವರದ BES ಶಾಲೆಯಲ್ಲಿ ಇಂದು ಸಂಭ್ರಮ ಮನೆಮಾಡಿತ್ತು. ಪೋಷಕರೊಂದಿಗೆ ಬಂದ ಮಕ್ಕಳಿಗೆ ಶಿಕ್ಷಕರು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದರು. ಜೊತೆಗೆ ಪೆನ್ನು, ಪೆನ್ಸಿಲ್, ಸ್ಯಾನಿಟೈಸರ್ ಕೊಟ್ಟು ಕೋವಿಡ್ ಪಾಠ ಮಾಡಿ ತರಗತಿಗೆ ಕಳುಹಿಸಲಾಯಿತು.
ಬಳಿಕ ಮಾತನಾಡಿದ ಬಿಇಎಸ್ ಶಾಲೆಯ ಅಧ್ಯಕ್ಷೆ ಶ್ರೀಮತಿ ಜಯರಾಮ್, 20 ತಿಂಗಳ ಬಳಿಕ ಪ್ರಾಥಮಿಕ ಶಾಲೆ ಆರಂಭವಾಗಿದ್ದು, ನಮ್ಮಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ಸರ್ಕಾರ ನೀಡಿರುವ ಸುತ್ತೋಲೆ ಪಾಲನೆ ಮಾಡುತ್ತಾ, ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಮಕ್ಕಳ ವ್ಯಕ್ತಿತ್ವ ರೂಪಿಸಲು ಶಾಲೆಯ ವಾತಾವರಣ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಶಾಲೆಗಳು ಆರಂಭವಾಗಿರುವುದು ಹಾಗೂ ನಿರೀಕ್ಷೆಗೆ ಮೀರಿ ಮಕ್ಕಳು ಶಾಲೆಗೆ ಬಂದಿರುವುದು ಸಂತಸ ತಂದಿದೆ ಅಂತ ತಿಳಿಸಿದರು.