ಬೆಂಗಳೂರು: ಮೆಟ್ರೋ ನಿಲ್ದಾಣದ ಬಳಿ ಅನುಮಾನಾಸ್ಪದ ವ್ಯಕ್ತಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಇದೇ ತಿಂಗಳ 6 ರಂದು ವ್ಯಕ್ತಿಯೊರ್ವ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದು, ಮೆಟಲ್ ಡಿಟಕ್ಟರ್ನಲ್ಲಿ ಬೀಪ್ ಸೌಂಡ್ ಬಂದಿತ್ತು. ತಕ್ಷಣ ಅಲ್ಲಿನ ಸಿಬ್ಬಂದಿ ಆತನನ್ನ ಪಕ್ಕಕ್ಕೆ ನಿಲ್ಲುವಂತೆ ಹೇಳಿದ್ದರು. ಪಕ್ಕಕ್ಕೆ ನಿಲ್ಲಲು ಹೇಳಿದ ತಕ್ಷಣ ಆತ ಅಲ್ಲಿಂದ ಕಾಲ್ಕಿತ್ತಿದ್ದ.
ನಂತರ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹಾಗೆ ಈತನ ಪತ್ತೆಗೆ ಒಂದು ತಂಡ ರಚನೆ ಮಾಡಲಾಗಿತ್ತು. ಇದೀಗ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನ ಬಗ್ಗೆ ಮಾಹಿತಿ ನೀಡಿದ್ದಾರೆ. ಈತ ರಾಜಸ್ಥಾನ ಮೂಲದ ಸಾಜೀದ್ ಖಾನ್. ಈತ ಪತ್ನಿ ಜೊತೆ ಮಸೀದಿ ಬಳಿ ಭಿಕ್ಷಾಟನೆ ಮಾಡುತ್ತಿದ್ದು, ಅಂದು ಸಂಜೆ ಮೆಟ್ರೋದಲ್ಲಿ ತೆರಳಲು ಬಂದಿದ್ದ. ಅವನ ಬಳಿ ಕಾಯಿನ್ಸ್ ಮತ್ತು ಎರಡು ತಾಯ್ತಾ ಇತ್ತು. ಅವು ಮೆಟಲ್ಸ್ ಆಗಿದ್ದರಿಂದ ಡಿಟೆಕ್ಟರ್ನಲ್ಲಿ ಸೌಂಡ್ ಬಂದಿದೆ ಎಂದಿದ್ದಾರೆ.
ಅವರ ಒಬ್ಬರು ಸಂಬಂಧಿ ಬೆಂಗಳೂರಿನಲ್ಲಿ ಇದ್ದಾರೆ. ಅವರ ಮನೆಗೆ ಯಾವಾಗಲು ರಂಜಾನ್ ತಿಂಗಳಲ್ಲಿ ಬರ್ತಿದ್ದ. ಆತನಿಗೆ ಮೆಟ್ರೋದಲ್ಲಿ ಹೋಗೋದು ಹೇಗೆ ಅಂತ ಗೊತ್ತಿಲ್ಲ. ಆತನ ಬಳಿ ಯಾವುದೇ ಆಯುಧಗಳೂ ಇರಲಿಲ್ಲ. ಬದಲಾಗಿ ಆತನಿಗೆ ಭಾಷೆ ಬಾರದ ಭಯದಿಂದ ವಾಪಸ್ ಹೋಗಿದ್ದಾನೆ ಎಂದು ಆಯುಕ್ತರು ತಿಳಿಸಿದ್ದಾರೆ.