ಬೆಂಗಳೂರು: ಶಾಲಾ ಬಸ್ ಹಾಗೂ ಟಿಟಿ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಬನ್ನೇರುಘಟ್ಟ ರಸ್ತೆಯ ರಾಗಿಹಳ್ಳಿ ಬಳಿಯ ಮುಖ್ಯ ರಸ್ತೆ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಸ್ತೆ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುಲೈ 9 ರಂದು ಈ ಘಟನೆ ಸಂಭವಿಸಿದ್ದು, ಅದೃಷ್ಣವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ರಾಯನ್ ಇಂಟರ್ ನ್ಯಾಷನಲ್ ಶಾಲೆಯ ಬಸ್ ಚಾಲಕ ಮಕ್ಕಳನ್ನು ಪಿಕಪ್ ಮಾಡಲು ಹೋಗುತ್ತಿದ್ದ. ಈ ವೇಳೆ ಬಸ್ನಲ್ಲಿ ಓರ್ವ ವಿದ್ಯಾರ್ಥಿ ಹಾಗೂ ಮಹಿಳೆಯೊಬ್ಬರು ಇದ್ದರು. ರಾಗಿಹಳ್ಳಿ ಬಳಿ ಬಸ್ ಸಂಚರಿಸುತ್ತಿದ್ದಾಗ ಜಂಕ್ಷನ್ ಬಳಿ ಬರುತ್ತಿದ್ದ ಟೆಂಪೋ ಟ್ರಾವೆಲರ್ (ಟಿಟಿ) ವೇಗವಾಗಿ ಬಂದು ನೇರವಾಗಿ ಬಸ್ ಹಿಂಬದಿಗೆ ಗುದ್ದಿದೆ. ಟಿಟಿ ಗುದ್ದಿದ ರಭಸಕ್ಕೆ ಬಸ್ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಚಾಲಕ ಸೇರಿದಂತೆ ಬಸ್ನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದ ವೇಳೆ ಬಸ್‌ನೊಳಗಿರುವ ಸಿಸಿಟಿವಿ ದೃಶ್ಯ ಮತ್ತು ಅದೇ ಅಪಘಾತದ ಸಂದರ್ಭದಲ್ಲಿ ಬಸ್‌ನ ಹೊರಗಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿವೆ. ಆದರೆ, ದೇವರು ದೊಡ್ಡವನು, ಯಾರಿಗೂ ಏನೂ ಆಗಿಲ್ಲ.