ಬೆಂಗಳೂರು: ರಾಜ್ಯಾದ್ಯಂತ ಇಂದು ಎಸ್ಎಸ್ಎಲ್ಸಿಯ ಕೊನೆಯ ಪರೀಕ್ಷೆ ನಡೆಯಲಿದೆ. ಕನ್ನಡ, ಇಂಗ್ಲಿಷ್, ಹಿಂದಿ ಮೂರು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಗ್ಗೆ 10-30ಕ್ಕೆ ಪರೀಕ್ಷೆ ಶುರುವಾಗಲಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಕಡೆ ಹಂತದ ತಯಾರಿ ನಡೆಸುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಆರು ದಿನಗಳ ಬದಲಿಗೆ ಎರಡು ದಿನ ಮಾತ್ರ ಪರೀಕ್ಷೆ ನಡೆಸಲಾಗುತ್ತಿದ್ದು, ಬಹು ಆಯ್ಕೆ ಪ್ರಶ್ನೆಗಳನ್ನಷ್ಟೇ ಕೇಳಲಾಗುತ್ತಿದೆ.
ಪರೀಕ್ಷಾ ಕೇಂದ್ರಕ್ಕೆ ಸುರೇಶ್ ಕುಮಾರ್ ಭೇಟಿ:
ಇಂದು ನಗರದ ಶ್ರೀರಾಂಪುರ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ವಿದ್ಯಾರ್ಥಿಗಳ ಬಳಿ ಹೋಗಿ, ಎಲ್ಲರೂ ಚೆನ್ನಾಗಿ ಓದಿದ್ದೀರಾ?, ತಿಂಡಿ ತಿಂದ್ರಾ? ಎಕ್ಸಾಂ ಚೆನ್ನಾಗಿ ಮಾಡಿ, ನನ್ ಕಡೆಯಿಂದ ಆಲ್ ದಿ ಬೆಸ್ಟ್ ಎಂದರು. ಬಳಿಕ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯಾ ಅಂತಾ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಮೊದಲ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಮೊದಲ ಪರೀಕ್ಷೆಯನ್ನು ಶೇ. 99.6 ರಷ್ಟು ವಿದ್ಯಾರ್ಥಿಗಳು ಬರೆದಿದ್ದಾರೆ. ಮೊನ್ನೆ, ನಿನ್ನೆ ರಾಜ್ಯದ ಡಿಡಿಪಿಐ, ಬಿಇಒಗಳ ಜೊತೆ ಸಭೆ ನಡೆಸಿ ಪರೀಕ್ಷೆ ಸಿದ್ಧತೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಮೊನ್ನೆಯಂತೆ ಇಂದು ಕೂಡ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿಶೇಷ ಕಾಳಜಿ ವಹಿಸಲಾಗಿದ್ದು, ಮಕ್ಕಳಿಗೆ ತೊಂದರೆ ಆಗದಂತೆ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಶಾಲಾ ಪುನಾರಂಭ ಸದ್ಯಕ್ಕಿಲ್ಲ:
ಇದೇ ವೇಳೆ ಶಾಲಾ ಪುನಾರಂಭದ ಬಗ್ಗೆ ಮಾತನಾಡಿದ ಅವರು, ಶಾಲೆಯ ಆರಂಭ ಸದ್ಯಕ್ಕಿಲ್ಲ. ತಜ್ಞರ ಸಮಿತಿ ವರದಿ ಬರಬೇಕಿದೆ. ಇನ್ನೆರಡು ದಿನದ ಬಳಿಕ ವರದಿ ಬರಲಿದ್ದು, ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.