ಬೆಂಗಳೂರು : ವ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಹಾಗೂ ಅನಗತ್ಯ ಮೇಲ್ಮನವಿಗಳನ್ನು ಸಲ್ಲಿಸಲು ಅವಕಾಶ ಇಲ್ಲದಂತೆ ನ್ಯಾಯಾಂಗ ಕಾರ್ಯಪ್ರವೃತ್ತವಾಗಬೇಕಿದೆ ಎಂದು ಮಾಜಿ ಲೋಕಾಯುಕ್ತ ಹಾಗೂ ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಎನ್ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಓದಿ: ಬೆಂಗಳೂರಿನಲ್ಲಿಂದು ಅತಿಹೆಚ್ಚು ಕೊರೊನಾ ಕೇಸ್.. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಅಭಾವ
ರಾಜ್ಯಮಟ್ಟದ 3ನೇ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಂಗ ಕ್ಷೇತ್ರವನ್ನು ಬಲಿಷ್ಠಗೊಳಿಸುವ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಲಭ್ಯವಾಗಬೇಕು ಎಂಬ ಹಿನ್ನೆಲೆ, ಲೋಕ ಅದಾಲತ್‌ಗಳನ್ನು ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ.
ಆದರೆ, ಇಂದು ನ್ಯಾಯ ದಾನ ವಿಳಂಬವಾಗುತ್ತಿದೆ. 1950ರಲ್ಲಿ ಸುಪ್ರೀಂಕೋರ್ಟ್ ಆರಂಭವಾದಾಗ 7 ನ್ಯಾಯಮೂರ್ತಿಗಳಿದ್ದರು. ವರ್ಷಕ್ಕೆ ಹೆಚ್ಚೆಂದರೆ 100 ಕೇಸುಗಳಿರುತ್ತಿದ್ದವು. ಆದರೀಗ ಲಕ್ಷಾಂತರ ಪ್ರಕರಣಗಳು ನ್ಯಾಯಾಲಯದ ಮುಂದಿವೆ.
ಹೆಚ್ಚೆಚ್ಚು ನ್ಯಾಯಮೂರ್ತಿಗಳನ್ನು ನಿಯೋಜಿಸುವುದರಿಂದ ಈ ಸಮಸ್ಯೆ ಕಡಿಮೆ ಮಾಡಲು ಸಾಧ್ಯವಿಲ್ಲ. ಮುಂದುವರಿದ ದೇಶಗಳಲ್ಲಿ ಕೋರ್ಟ್ ವ್ಯವಸ್ಥೆ ಎರಡು ಹಂತದಲ್ಲಿವೆ. ಒಂದು ವಿಚಾರಣಾ ನ್ಯಾಯಾಲಯ, ಮತ್ತೊಂದು ಉನ್ನತ ನ್ಯಾಯಾಲಯ.
ಪ್ರಕರಣವನ್ನು ವಿಚಾರಣೆ ನಡೆಸಿ ತಪ್ಪಿದ್ದರೆ ಮಾತ್ರ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ. ಹೀಗಿದ್ದಾಗ, ಅನಗತ್ಯ ಮೇಲ್ಮನವಿಗಳನ್ನು ಸಲ್ಲಿಸಲು, ನ್ಯಾಯಕ್ಕಾಗಿ ವರ್ಷಗಟ್ಟಲೆ ಅಲೆದಾಡುವುದು ತಪ್ಪುತ್ತದೆ.
ಆದರೆ, ನಮ್ಮಲ್ಲಿ ಪ್ರಾಧಿಕಾರ, ನ್ಯಾಯಾಧಿಕರಣ, ವಿಚಾರಣಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂಕೋರ್ಟ್ ಎಂದು ಹಲವು ಹಂತದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿರುವುದೇ ನ್ಯಾಯದಾನ ವಿಳಂಬ ಮತ್ತು ಸುಧೀರ್ಘವಾಗಿದೆ ಎಂದರು.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಮಾತನಾಡಿ, ಕೋವಿಡ್ ಆವರಿಸಿದ ಬಳಿಕ 3ನೇ ಬಾರಿ ರಾಜ್ಯ ಮಟ್ಟದ ಲೋಕ ಅದಾಲತ್ ಹಮ್ಮಿಕೊಂಡಿದ್ದೇವೆ. ಹಿಂದಿನ ಎರಡು ಲೋಕ ಅದಾಲತ್ ನಲ್ಲಿ 3.65 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇವೆ. ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾ. ಅರವಿಂದ್ ಕುಮಾರ್ ನೇತೃತ್ವದಲ್ಲಿ ಪ್ರಾಧಿಕಾರದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಮಾತನಾಡಿ, ಇತ್ತೀಚೆಗೆ ವಿಧಾನಸೌಧ ಕಲಾಪದಲ್ಲಿ ಜನಪ್ರತಿನಿಧಿಗಳು ನ್ಯಾಯಾಂಗದ ಭ್ರಷ್ಟಾಚಾರದ ಕುರಿತು ಚರ್ಚಿಸಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ಜನಪ್ರತಿನಿಧಿಗಳಿಗೂ ಜವಾಬ್ದಾರಿ ಇರುತ್ತದೆ. ಹಾಗಿದ್ದೂ, ಜನಪ್ರತಿನಿಧಿಗಳು ನ್ಯಾಯಾಂಗವನ್ನು ನೈತಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಅದರದೇ ಆದ ಪವಿತ್ರ ಸ್ಥಾನ ಹಾಗೂ ಜವಾಬ್ದಾರಿ ಇದೆ. ಈ ಕಾರ್ಯವನ್ನು ರಾಜ್ಯದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅವರಿಗೆ ವಕೀಲ ಸಮುದಾಯದ ಬೆಂಬಲವಿದೆ. ಅದಾಲತ್ ಗಳ ಮೂಲಕ ಜನರ ಬಳಿಗೆ ನ್ಯಾಯ ತೆಗೆದುಕೊಂಡು ಹೋಗುವ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಹಾಗೂ ಧಾರವಾಡ ಪೀಠಗಳ ಎಲ್ಲ ನ್ಯಾಯಮೂರ್ತಿಗಳು, ರಾಜ್ಯ ವಕೀಲರ ಪರಿಷತ್ತಿನ ಪದಾಧಿಕಾರಿಗಳು, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಭಾಗಿಯಾಗಿದ್ದರು.