ಬೆಂಗಳೂರು: ಬಿಬಿಎಂಪಿ ಯಲಹಂಕ ವಲಯದ ಥಣಿಸಂದ್ರ ವಾರ್ಡ್-6 ವ್ಯಾಪ್ತಿಗೆ ಬರುವ ರಾಚೇನಹಳ್ಳಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಇಂದು ನಡೆಸಲಾಯಿತು.
ಯಲಹಂಕ ವಲಯದ ಜಂಟಿ ಆಯುಕ್ತರು, ಕೆರೆಗಳ ವಿಭಾಗದ ಮುಖ್ಯ ಅಭಿಯಂತರರು ಹಾಗೂ ಕಾರ್ಯಪಾಲಕ ಅಭಿಯಂತರರು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ, ಕೆರೆಯ ಪೂರ್ವಭಾಗದಲ್ಲಿ ಸ್ಥಳೀಯರು 2 ಎಕರೆ 38 ಗುಂಟೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು 8 ತಾತ್ಕಾಲಿಕ ಶೆಡ್, ಚಪ್ಪಡಿ ಕಲ್ಲು, ಹೂ ಕುಂಡಗಳ ಮಾರಾಟ ಹಾಗೂ ಹೋಟೆಲ್ ವ್ಯಾಪಾರವನ್ನು ಅನಧಿಕೃತವಾಗಿ ನಡೆಸುತ್ತಿದ್ದರು. ಈಗ ಈ ಪ್ರದೇಶವನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆದರು. ಅಲ್ಲದೆ ತೆರವುಗೊಳಿಸಲಾದ ಪ್ರದೇಶಕ್ಕೆ ತಂತಿ ಬೇಲಿ ಅಳವಡಿಸುವ ಕಾರ್ಯಕ್ಕೆ ಸೂಚನೆ ನೀಡಿದರು.
ರಾಚೇನಹಳ್ಳಿ ಕೆರೆಯು ಒಟ್ಟು 91.39 ಎಕರೆ ಪ್ರದೇಶದಲ್ಲಿದ್ದು, ಈ ಪೈಕಿ ಒಟ್ಟು 3.37 ಎಕರೆ ಒತ್ತುವರಿಯಾಗಿದೆ. ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ಕ್ರಮ ವಹಿಸಿ ಪಾಲಿಕೆ ವ್ಯಾಪ್ತಿಯಲ್ಲಿನ ಕೆರೆ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿ, ಕೆರೆಯಲ್ಲಿನ ಎಲ್ಲಾ ಒತ್ತುವರಿದಾರರಿಗೆ ಸೂಚನಾ ಪತ್ರ ನೀಡಲಾಗಿತ್ತು. ಕೆಲ ಒತ್ತುವರಿದಾರರು ಹೈಕೋರ್ಟ್ ಮೊರೆ ಹೋಗಿ ಮುಂದಿನ ವಿಚಾರಣೆಯವರೆಗೂ ಯಾವುದೇ ಕ್ರಮ ವಹಿಸದಂತೆ ಸೂಚಿಸಿದ್ದು, ಮುಂದಿನ ವಿಚಾರಣೆ ಮಾಡಿ ಆದೇಶ ನೀಡುವವರೆಗೂ ಒತ್ತುವರಿ ತೆರವು ಮಾಡದಂತೆ ತಡೆಯಾಜ್ಞೆ ನೀಡಿದೆ.
ಒಟ್ಟು ಒತ್ತುವರಿಯ ಪೈಕಿ ತಡೆಯಾಜ್ಞೆ ಇಲ್ಲದೇ ಇರುವ 2.38 ಎಕರೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗಿದ್ದು, ಇದರ ಮೌಲ್ಯ 80 ಕೋಟಿ ರೂ. ಆಗಿದೆ ಎಂದು ಮುಖ್ಯ ಅಭಿಯಂತರರು(ಕೆರೆಗಳು) ಮೋಹನ್ ಕೃಷ್ಣಾ ತಿಳಿಸಿದ್ದಾರೆ.