ಬೆಂಗಳೂರು: ಕೊರೊನಾ ನಡುವೆಯೇ ಇದೀಗ ಮರೆಯಾಗಿದ್ದ ಮತ್ತೊಂದು ವೈರಸ್ ಸದ್ದಿಲ್ಲದೇ ಕಾಲಿಡುತ್ತಿದೆ. ನೆರೆಯ ಕೇರಳದಲ್ಲಿ ಝಿಕಾ ವೈರಸ್ ಪ್ರಕರಣ ಪತ್ತೆಯಾದ ಹಿನ್ನೆಲೆ ರಾಜ್ಯದಲ್ಲೂ ಕಟ್ಟೆಚ್ಚರವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಬಹುಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ ಜಿಲ್ಲೆಗಳಲ್ಲಿ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದು, ವೈರಸ್ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಆದೇಶಿಸಿದೆ. ಸೊಳ್ಳೆಗಳಿಂದ ಹರಡುವ ಸೋಂಕು ಇದಾಗಿದ್ದು,ಆದ್ದರಿಂದ ಸೊಳ್ಳೆಗಳ ಸಂತತಿ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ತಿಳಿಸಿದೆ.
ಏರ್ ಪೋರ್ಟ್, ಸಮುದ್ರ ತೀರ, ಹಳ್ಳಿಗಳು ಮತ್ತು ಬಡಾವಣೆಗಳಲ್ಲಿ ಏಡೀಸ್ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಹಾಗೂ ಜನವಸತಿ ಪ್ರದೇಶಗಳ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಸೊಳ್ಳೆಗಳ ನಿಯಂತ್ರಣ ಕಾರ್ಯ ಮಾಡಿ ಈ ಬಗ್ಗೆ ಪ್ರತೀ ವಾರ ಸಿಬ್ಬಂದಿಯಿಂದ ಆರೋಗ್ಯ ಇಲಾಖೆಗೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.
ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಈ ಝಿಕಾ ವೈರಸ್ ಭಾರೀ ಡೇಂಜರ್, ಮೈಮೇಲೆ ಕೆಂಪು ರಾಶಸ್, ಜ್ವರ, ಗಂಟು ನೋವು ಇದ್ದು ಪ್ರಯಾಣದ ಹಿನ್ನೆಲೆ ಇದ್ದವರ ಪರೀಕ್ಷೆ ಮಾಡಬೇಕು. ಇವರ ರಕ್ತದ ಮಾದರಿಯನ್ನು NIV ಯೂನಿಟ್ಗೆ ಕಳಿಸಬೇಕು. ಗರ್ಭಿಣಿಯರ ಅಲ್ಟ್ರಾಸೌಂಡ್ ಮಾಡುವಾಗ ಮೈಕ್ರೊಸೆಫಾಲಿ (ಮಗುವಿನ ತಲೆಯ ಬೆಳವಣಿಗೆಯಲ್ಲಿ ವ್ಯತ್ಯಾಸ) ಇರುವ ಬಗ್ಗೆ ಗಮನಹರಿಸಬೇಕು. ಅಂತಹ ಪ್ರಕರಣ ಕಂಡುಬಂದರೆ ರಕ್ತದ ಮಾದರಿಯನ್ನು NIV ಗೆ ಕಳಿಸಬೇಕೆಂದು ತಿಳಿಸಲಾಗಿದೆ.
ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತೀ ವಾರ ಜನಿಸುವ ಎಲ್ಲಾ ಮಕ್ಕಳ ವಿವರ ಪಡೆಯಬೇಕು, ಯಾವುದೇ ಮಗುವಿನಲ್ಲಿ ಮೈಕ್ರೊಸೆಫಾಲಿ ಕಂಡುಬಂದರೆ ಕೂಡಲೇ ತಾಯಿ ಮತ್ತು ಮಗು ಇಬ್ಬರ ರಕ್ತದ ಮಾದರಿ NIV ಗೆ ಕಳಿಸಬೇಕೆಂದು ಕೂಡ ಆದೇಶಿಸಿದೆ.