ಬೆಂಗಳೂರು: ಹಿಜಾಬ್ ವಿವಾದದ ವಿಚಾರವಾಗಿ ನಿಲುವು ಸ್ಪಷ್ಟಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಹಿರಿಯ ನಾಯಕರ ಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ನಿಲುವೇನು, ಪಕ್ಷದ ಮುಖಂಡರು ಯಾವ ರೀತಿಯ ಹೇಳಿಕೆಗಳನ್ನು ನೀಡಬೇಕು ಎಂಬುದರ ಕುರಿತು ಈ ಸಭೆಯಲ್ಲಿ ಹಿರಿಯ ನಾಯಕರು ನಿರ್ದೇಶನ ನೀಡಲಿದ್ದಾರೆ. ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ಹಾಗೂ ಸಾರ್ವಜನಿಕವಾಗಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುವಾಗ ಯಾವ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂಬುದರ ಬಗೆಗೂ ಪ್ರಸ್ತಾಪವಾಗಲಿದೆ.
ಪಕ್ಷದ ನಾಯಕರಿಗೆ ಮುಜುಗರ ತರಿಸುವ ಹಾಗೂ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಮಾದರಿಯ ಹೇಳಿಕೆ ನೀಡಬಾರದು. ಯಾರೇ ಎಲ್ಲೇ ಮಾತನಾಡಿದರೂ ಅದು ಪಕ್ಷದ ಮೂಲ ತತ್ವ ಸಿದ್ಧಾಂತಕ್ಕೆ ಧಕ್ಕೆಯಾಗದ ರೀತಿ ಇರಬೇಕು. ಈ ನಿಟ್ಟಿನಲ್ಲಿ ಹಿಜಾಬ್ ವಿಚಾರವಾಗಿ ಪಕ್ಷ ಯಾವ ನಿಲುವು ತೆಗೆದುಕೊಳ್ಳುತ್ತದೆ ಅದಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂಬ ತೀರ್ಮಾನ ಸಭೆಯಲ್ಲಿ ಆಗಲಿದೆ.
ಕೋರ್ಟ್ ಕಲಾಪ, ಸದನದಲ್ಲಿ ಚರ್ಚೆ ಕೈಗೆತ್ತಿಕೊಳ್ಳುವ ಪರಿ, ಪಕ್ಷದ ನಿಲುವಿನ ಬಗ್ಗೆಯೂ ಚರ್ಚೆ ಆಗಲಿದೆ. ಹಿಜಾಬ್ ವಿಚಾರವಾಗಿ ನಿರ್ದಿಷ್ಠವಾಗಿ ಕೆಲವರು ಮಾತ್ರ ಮಾಧ್ಯಮಗಳಿಗೆ ಹೇಳಿಕೆ ನೀಡುವಂತೆ ನಿರ್ಬಂಧ ವಿಧಿಸುವ ಸಾಧ್ಯತೆಯೂ ಇದೆ. ಸದನದಲ್ಲಿ ಹಿಜಾಬ್ ಹಾಗೂ ಈಶ್ವರಪ್ಪ ಹೇಳಿಕೆ ಖಂಡಿಸಿ ಪ್ರತಿಭಟನೆ ಸ್ವರೂಪ ನಿರ್ಧರಿಸಲಿರುವ ಕೈ ಹಿರಿಯ ನಾಯಕರು ನಿಲುವಳಿ ಸೂಚನೆ ನೀಡುವ ಬಗ್ಗೆ ಒಲವು ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಿದೆ.
ಕೃಷಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಕುಸಿತವನ್ನು ಖಂಡಿಸಿ ಸದನದಲ್ಲಿ ಧರಣಿ ನಡೆಸಲು ಒಂದು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೂ ಪಾದಯಾತ್ರೆ ನಡೆಸೋ ಸಾಧ್ಯತೆಯೂ ಇದ್ದು, ಇಂದಿನ ಸಭೆಯಲ್ಲಿ ಆ ಬಗ್ಗೆ ಚರ್ಚೆ ನಡೆದು ದಿನಾಂಕ ನಿರ್ಧಾರವಾಗಲಿದೆ. ಬಹುತೇಕ ಗುರುವಾರದಂದು ಪಾದಯಾತ್ರೆ ದಿನಾಂಕ ನಿಗದಿಯಾಗುವ ಸಾಧ್ಯತೆ ಹೆಚ್ಚಿದೆ. 40% ಕಮಿಷನ್, ಅನುದಾನ ತಾರತಮ್ಯ ಸೇರಿದಂತೆ ಹಲವು ವಿಚಾರ ಮುಂದಿಟ್ಟು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಲು ಹಿರಿಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಚರ್ಚೆ ನಡೆಯಲಿದೆ.