ಬೆಂಗಳೂರು: ಜಿಲ್ಲೆಯ ಬೀಳಗಿ ತಾಲೂಕಿನಿಂದ ಭಕ್ತಾದಿಗಳು ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಮಾಡುತ್ತಾರೆ. ಆದರೆ, ಈ ಬಾರಿ ಭಕ್ತಾದಿಗಳ ಮೇಲೆ ಆದ ಹಲ್ಲೆ, ಗಲಾಟೆ ಬಗ್ಗೆ ಬಹಳ ನೋವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಬೀಳಗಿ ಶಾಸಕ ಮುರುಗೇಶ್ ಆರ್ ನಿರಾಣಿ ತಿಳಿಸಿದರು.
ನನ್ನ ಮತ ಕ್ಷೇತ್ರ ಬೀಳಗಿಯ ಯುವಕ ಶ್ರೀಶೈಲ್ ವಾರಿಮಠ ಅವರಿಗೆ ಚಾಕು ಇರಿತ ಬಹಳ ನೋವು ತಂದಿದೆ. ಈ ಹಿನ್ನೆಲೆ ಆಂಧ್ರ ಪ್ರದೇಶ ಕರ್ನೂಲ್ ಜಿಲ್ಲೆ ಎಸ್ ಪಿ ಸುಧೀರ್ ಕುಮಾರ ರೆಡ್ಡಿ ಜೊತೆ ಮಾತನಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ಘಟನೆಯ ಸವಿವರ ಕೇಳಿದ್ದೇನೆ. ಗಾಯಗೊಂಡ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದ ಶ್ರೀಶೈಲ ವಾರಿಮಠ, ಮತ್ತಿತರ ಚಿಕಿತ್ಸೆಗೆ ಅಲ್ಲಿ ಆಸ್ಪತ್ರೆ, ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ.
ಕನ್ನಡಿಗರ ಮೇಲೆ ಹಲ್ಲೆ ವಾಹನ ಜಖಂಗೊಳಿಸಿದ್ದು ಖಂಡನೀಯ, ಕನ್ನಡಿಗರು ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಶಾಂತಿಯಿಂದ ಇರಿ. ಸರಕಾರ ಪರಿಸ್ಥಿತಿ ನಿರ್ವಹಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ನಿರಾಣಿ ತಿಳಿಸಿದರು.
ಇದನ್ನೂ ಓದಿ: ಆಂಧ್ರದ ಶ್ರೀಶೈಲಂನಲ್ಲಿ ಕನ್ನಡಿಗರು, ಸ್ಥಳೀಯರ ನಡುವೆ ಘರ್ಷಣೆ: ವಾಹನಗಳು, ಅಂಗಡಿಗಳಿಗೆ ಹಾನಿ