ಬೆಂಗಳೂರು: ಚುನಾವಣೆಗಳು ಜಾತಿ, ಹಣ, ತೋಳ್ಬಲ, ಪಕ್ಷಾಂತರದಿಂದ ನಡೆಯುತ್ತವೆ ಎಂದು ಜನಾಭಿಪ್ರಾಯ ಇದೆ. ಚುನಾವಣಾ ವ್ಯವಸ್ಥೆಗಳಲ್ಲಿ ಸುಧಾರಣೆ ತರಬೇಕೆಂಬ ಅಭಿಪ್ರಾಯವಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಭಾಗಿಯಾಗಿರುವವರೇ, ಹಾಗಾಗಿ ಈ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಕ್ಕೆ ಪತ್ರ: ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 17 ಲೋಕಸಭಾ ಚುನಾವಣೆಗಳನ್ನು ನೋಡಿದ್ದೇವೆ. ನಮ್ಮ ರಾಜ್ಯದಲ್ಲಿ 15 ವಿಧಾನಸಭಾ ಚುನಾವಣೆಗಳನ್ನು ನೋಡಿದ್ದೇವೆ. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆ ನಮ್ಮ ಕಣ್ಣ ಮುಂದೆ ಇದೆ. ಮುಂದೆ ಬೇರೆ ಬೇರೆ ಚುನಾವಣೆಗಳೂ ಎದುರಾಗಲಿವೆ. ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಬಗ್ಗೆ ಹಿರಿಯರು ಹೇಳಿದ್ದಾರೆ ಎಂದರು.
ಚುನಾವಣಾ ಆಯೋಗಕ್ಕೆ ಸಂವಿಧಾನಬದ್ಧವಾದ ಹತ್ತಾರು ಜವಾಬ್ದಾರಿಗಳನ್ನು ಕೊಡಲಾಗಿದೆ. ಅದರ ಅಡಿಯಲ್ಲಿ ಆಯೋಗ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯಲ್ಲಿ ಸುಧಾರಣೆಯ ವಿಚಾರವಾಗಿ ನಾನು ಸರ್ಕಾರಕ್ಕೂ ಕೂಡಾ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಚುನಾವಣಾ ವ್ಯವಸ್ಥೆ ಕುರಿತು ಚರ್ಚೆ: ಮೌನ ಮುರಿದು ಮಾತಾಡುವ ನೈತಿಕ ಜವಾಬ್ದಾರಿಯನ್ನು ಹಿರಿಯರು ಮೆರೆಯಬೇಕು. ವಿಧಾನಸಭೆ ಒಳಗೂ ಕೂಡಾ ಈ ಚರ್ಚೆಯನ್ನು ಆರಂಭಿಸುವ ಬಗ್ಗೆಯೂ ಮಾತಾಡುತ್ತೇನೆ. ಆಯ್ಕೆಯಾಗುವ ಜನಪ್ರತಿನಿಧಿಗಳ ಕಷ್ಟ ಏನು ಅನ್ನೋದನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ನೋಡಿದ್ದೇವೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಬಗ್ಗೆ ಹೇಗೆ ವಿಶ್ಲೇಷಣೆ ನಡೆದಿದೆ ಅನ್ನುವುದು ಕೂಡಾ ಗೊತ್ತಿದೆ.
ಪ್ರಜಾಪ್ರಭುತ್ವದಲ್ಲಿ ಚುನಾವಣಾ ವ್ಯವಸ್ಥೆಯ ಸುಧಾರಣೆ ಬಗ್ಗೆ ಜನತೆಯಲ್ಲಿ ಚರ್ಚೆ ಆರಂಭವಾಗಬೇಕು. ಈವರೆಗಿನ ನಮ್ಮ ಅನುಭವದ ಹಿನ್ನೆಲೆಯಲ್ಲಿ ರಚನಾತ್ಮಕ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಸಮಸ್ಯೆಗಳ ಸುಳಿಯಲ್ಲಿ ಜನಜೀವನವನ್ನು ನೋಡಬೇಕಾಗುತ್ತದೆ. ಚುನಾವಣಾ ವ್ಯವಸ್ಥೆ ಬಗ್ಗೆ ಚರ್ಚೆ ಪ್ರಾರಂಭಿಸಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದು ಸ್ಪೀಕರ್ ಹೇಳಿದರು.
ಮಠಾಧೀಶರ ಜವಾಬ್ದಾರಿ ಬಗ್ಗೆ ಏನಂದ್ರು? ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದೇವೆ. ಆದರೆ ಹಿರಿಯರು ಇದನ್ನು ಮೌನವಾಗಿ ನೋಡುತ್ತಾ ಅನುಭವಿಸುವ ದುಸ್ಥಿತಿ ಇದೆ. ಸಮಾಜಕ್ಕೆ ಕಹಿಯಾದರೂ ಹಿತ ಮಾತುಗಳನ್ನು ಹೇಳಬೇಕಾದ ಜವಾಬ್ದಾರಿ ಹಿರಿಯರ ಮೇಲಿದೆ. ಕೇವಲ ಜನಪ್ರತಿನಿಧಿಗಳ ಬಗ್ಗೆ ಹೇಳುವುದು ಬೇಡ. ಮಠಾಧೀಶರ ಜವಾಬ್ದಾರಿ ಕೂಡಾ ಬಹಳ ದೊಡ್ದದಿದೆ. ಅವರು ಕೂಡಾ ಈ ಚರ್ಚೆಯಲ್ಲಿ ಭಾಗಿಯಾಗಬೇಕು. ರಾಜಕಾರಣಿಗಳನ್ನು ತೋರಿಸಿಕೊಂಡು ತಮ್ಮ ದೌರ್ಬಲ್ಯ ಮುಚ್ಚಿಟ್ಟುಕೊಂಡು ಯಾರೂ ಇರುವ ಪರಿಸ್ಥಿತಿ ಆಗಬಾರದು ಎಂದು ಅಭಿಪ್ರಾಯಪಟ್ಟರು.
ಚುನಾವಣಾ ಆಯೋಗದ ಜವಾಬ್ದಾರಿ: ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳಬೇಕು. ಆಯೋಗ ಯಾಂತ್ರಿಕವಾಗಿ ಚುನಾವಣೆ ನಡೆಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಚುನಾವಣಾ ಆಯೋಗಕ್ಕೆ ಸ್ವತಂತ್ರ ಜವಾಬ್ದಾರಿ ಇದೆ. ಸುಧಾರಣೆ ಬಗ್ಗೆ ಆಯೋಗ ಗಮನ ಹರಿಸಬೇಕು ಎಂದರು.
ಸದನದ ಕಾರ್ಯ ಕಲಾಪಗಳು ಸುಗಮವಾಗಿ ನಡೆಯಬೇಕಾದರೆ ಆಯ್ಕೆಯಾಗುವ ಜನಪ್ರತಿನಿಧಿಗಳ ಮಟ್ಟವೂ ಅದೇ ಸ್ತರದಲ್ಲಿ ಇರಬೇಕಾಗುತ್ತದೆ. ಸಂವಿಧಾನದ ಆಶಯಗಳಿಗೆ ಶಕ್ತಿ ಕೊಡಲು ನಾವು ಸಾಮೂಹಿಕ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸಂಸದೀಯ ವ್ಯವಸ್ಥೆ ದಿನದಿಂದ ದಿನಕ್ಕೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಸಂವಿಧಾನದ ಆಶಯಗಳಿಗೆ ಶಕ್ತಿ ಕೊಡಬೇಕಿದೆ. ಚುನಾವಣಾ ಆಯೋಗಕ್ಕೆ ಸಂವಿಧಾನ ಬದ್ಧವಾದ ಜವಾಬ್ದಾರಿ ಕೊಡಲಾಗಿದೆ. ಅದರ ಅಡಿಯಲ್ಲಿ ಚುನಾವಣೆ ನಡೆಸಬೇಕಿರುವುದು ಆಯೋಗದ ಕರ್ತವ್ಯ. ಸರ್ಕಾರದ ನೀತಿ ನಿರ್ವಹಿಸುವುದು ಚುನಾವಣಾ ಆಯೋಗದ ಕೆಲಸ ಎಂದರು.
ಪಕ್ಷಗಳು ಜವಾಬ್ದಾರಿಯನ್ನರಿತು ಕೆಲಸ ಮಾಡಬೇಕಿದೆ: ವ್ಯವಸ್ಥೆ ಸುಧಾರಿಸದೆ ಇದ್ದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ. ಯುವ ಸಮುದಾಯ ವ್ಯವಸ್ಥೆಯ ಕಾವಲುಗಾರರಾಗಿ ನಿಲ್ಲಬೇಕು. ಇನ್ನಷ್ಟು ಜವಾಬ್ದಾರಿಯಾಗಿ ಯೋಚಿಸಬೇಕು. ಎಲ್ಲರೂ ಮೂಕ ಪ್ರೇಕ್ಷಕರಾದರೆ ಯಾರಿಂದ ವ್ಯವಸ್ಥೆ ಬದಲಾವಣೆಯನ್ನು ಬಯಸುವುದು?. ಸಂವಿಧಾನ ನಮಗೆ ಎಲ್ಲಾ ಅವಕಾಶಗಳನ್ನು ಕೊಟ್ಟಿದೆ. ಕೇವಲ ರಾಜಕೀಯ ಪಕ್ಷಗಳನ್ನು ದೂರುವುದನ್ನು ಬಿಟ್ಟು ಈ ವ್ಯವಸ್ಥೆಯಲ್ಲಿ ಎಲ್ಲರೂ ಭಾಗಿಯಾಗಬೇಕು. ವ್ಯವಸ್ಥೆಯನ್ನು ಕಲುಷಿತಗೊಳಿಸಬಾರದೆಂದು ರಾಜಕೀಯ ಪಕ್ಷಗಳಿಗೆ ವಿನಂತಿಸಿಕೊಳ್ಳುತ್ತೇನೆ. ಎಲ್ಲಾ ಪಕ್ಷಗಳು ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ ಎಂದು ವಿಧಾನಸಭೆಯ ಆಧ್ಯಕ್ಷರು ಸಲಹೆ ನೀಡಿದರು.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಅವ್ಯವಹಾರ ವಿಚಾರಣೆಗೆ ಎಡಿಜಿಪಿ ಎಸ್. ಮುರುಗನ್ ನೇಮಕ
ಸಭಾಧ್ಯಕ್ಷನಾಗಿ ಎರಡೂವರೆ ವರ್ಷದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಗೆ ಶಕ್ತಿ ಕೊಡುವ ಪ್ರಯತ್ನ ಮಾಡಿದ್ದೇನೆ. ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂಬ ವಿಷಯದ ಬಗ್ಗೆ ಸದನದಲ್ಲಿ ಚರ್ಚಿಸಿದ್ದೇವೆ. ಒಂದು ರಾಷ್ಟ್ರ, ಒಂದು ಚುನಾವಣೆ ಚರ್ಚೆಗೆ ಪ್ರಯತ್ನ ನಡೆದಿರುವುದು ಎಲ್ಲರಿಗೂ ಗೊತ್ತಿದೆ. ಪ್ರತ್ಯಕ್ಷ, ಪರೋಕ್ಷವಾಗಿ ಈ ವ್ಯವಸ್ಥೆಯನ್ನು ಜನಪರಗೊಳಿಸಲು ಪ್ರಯತ್ನಿಸಿದ್ದೇನೆ. ದೇಶ, ವಿದೇಶಗಳ ಅನೇಕ ವೇದಿಕೆಗಳಲ್ಲಿ ಹಲವು ವಿಚಾರಗಳನ್ನ ಚರ್ಚಿಸಿದ್ದೇವೆ ಎಂದು ಹೇಳಿದರು.
ಕುಮಾರಸ್ವಾಮಿ ಮೇಲಿರುವ ಆರೋಪ: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮೇಲಿರುವ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಘಟನೆ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇನ್ನಷ್ಟು ಮಾಹಿತಿ ಪಡೆದುಕೊಳ್ಳುತ್ತೇನೆ. ಶಾಸಕರ ಭವನದ ಒಳಗೆ ಏನೂ ನಡೆದಿಲ್ಲ ಎಂದರು.